×
Ad

ಬೀದರ್ | ದಲಿತರ ಮೇಲೆ ದೌರ್ಜನ್ಯ ಹೆಚ್ಚಳ ಆರೋಪ : ಸಚಿವ ಈಶ್ವರ್ ಖಂಡ್ರೆ ಪ್ರತಿಕೃತಿ ದಹಿಸಿ ಪ್ರತಿಭಟನೆ

Update: 2025-05-06 22:02 IST

ಬೀದರ್ : ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಳವಾಗುತ್ತಿದೆ ಎಂದು ಆರೋಪಿಸಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಪ್ರತಿಕೃತಿ ದಹಿಸುವ ಮೂಲಕ ದಲಿತ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಯಿತು.

ಇಂದು ನಗರದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ರ‍್ಯಾಲಿಯು ಅಂಬೇಡ್ಕರ್ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಸಚಿವರ ವಿರುದ್ಧ ಘೋಷಣೆ ಕೂಗಲಾಯಿತು. ನಂತರ ಭಗತ್ ಸಿಂಗ್ ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಸಚಿವ ಈಶ್ವರ್ ಖಂಡ್ರೆ ಅವರ ಪ್ರತಿಕೃತಿ ದಹಿಸಿ ಆಕ್ರೋಶ ಹೊರ ಹಾಕಲಾಯಿತು.

ಜಿಲ್ಲಾಧಿಕಾರಿ ಮೂಲಕ ವಿಧಾನ ಸಭಾಧ್ಯಕ್ಷರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ಇಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದರಿಂದಾಗಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ನಗರದ ಹೃದಯ ಭಾಗವಾದ ಜಿಲ್ಲಾಧಿಕಾರಿ ಕಚೇರಿ ಹತ್ತಿರವೇ ಎಟಿಎಂ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಹಣ ದರೋಡೆ ಮಾಡಿಕೊಂಡು ಹೋಗಲಾಯಿತು. ಇದಕ್ಕೆ ಸಂಬಂಧಿಸಿದಂತೆ ದರೋಡೆಕೊರರನ್ನು ಬಂಧಿಸಲಿಲ್ಲ. ಹಾಗೆಯೇ ಗುಂಡೇಟಿಗೆ ಬಲಿಯಾದ ಎಟಿಎಂ ಸಿಬ್ಬಂದಿ ಕುಟುಂಬಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ನೀಡಲಿಲ್ಲ ಎಂದು ಆರೋಪಿಸಲಾಗಿದೆ.

ಸರ್ಕಾರದಿಂದ ಆಯೋಜಿಸಿರುವ ಸಂವಿಧಾನ ಜಾಗೃತಿ ಜಾಥಾಕ್ಕೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದರು. ತಳವಾಡ ಗ್ರಾಮದಲ್ಲಿ ಮಹಿಳೆಯೊಬ್ಬಳು ವ್ಯಕ್ತಿಯೋರ್ವನಿಗೆ ಜಾತಿ ನಿಂದನೆ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈದಿದ್ದಳು. ಚಳಕಾಪುರ ಗ್ರಾಮದಲ್ಲಿ ಸವರ್ಣಿಯರು ದಲಿತರ ಕೇರಿಗೆ ಹೊಕ್ಕು ಜಾತಿ ನಿಂದನೆ ಮಾಡುತ್ತಾ, ದಲಿತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು. ವಿಳಾಸಪುರ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಲಾಯಿತು. ಬೇಡಕುಂದಾ ಗ್ರಾಮದಲ್ಲಿ ಮೇಲ್ಜಾತಿ ಯುವತಿಯನ್ನು ಪ್ರೀತಿಸಿದಕ್ಕೆ ದಲಿತ ಯುವಕನನ್ನು ಕೊಲೆ ಮಾಡಲಾಯಿತು. ಜಿಲ್ಲೆಯಲ್ಲಿ ಇಂತಹ ಇನ್ನು ಹಲವಾರು ಘಟನೆಗಳು ನಡೆದರೂ ಕೂಡ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಕಾರ್ಯ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾದ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಸಂಪೂರ್ಣವಾಗಿ ವಿಫಲರಾದ ಎಸ್ಪಿ ಪ್ರದೀಪ್ ಗುಂಟಿ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು. ಜಿಲ್ಲಾದ್ಯಂತ ದಲಿತರ ಮೇಲೆ ದಾಖಲಾದ ಪ್ರಕರಣಗಳನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಗೌರವ ಅಧ್ಯಕ್ಷ ವಿಷ್ಣುವರ್ಧನ್ ವಾಲ್ದೊಡ್ಡಿ, ಅಧ್ಯಕ್ಷ ವಿನೋದ್ ರತ್ನಾಕರ್, ಪ್ರಧಾನ ಕಾರ್ಯದರ್ಶಿ ಅಮೃತ್ ಮುತ್ತಂಗಿಕರ್, ಉಪಾಧ್ಯಕ್ಷ ಸುಭಾಷ್ ಲಾಧಾ, ಗೌತಮ್ ಪ್ರಸಾದ್, ರಾಜಕುಮಾರ್ ಸಿಂಧೆ, ಅಂಬರೀಶ್ ಕುದರೆ, ಸಂತೋಷ್ ಸಿಂಧೆ, ರಾಜಕುಮಾರ್ ಡೋಂಗ್ರೆ, ಅಂಬಾದಾಸ್ ಚಕ್ರವರ್ತಿ, ರಾಹುಲ್ ಖಂದಾರೆ, ಸಚಿನ್ ಗಿರಿ, ಶಕ್ತಿಕಾಂತ್ ಭಾವಿದೊಡ್ಡಿ, ಸತೀಶ್ ದೊಡ್ಡಿ, ಶಂಕರ್ ಫುಲೆ, ಮಹೇಶ್ ಭೋಲಾ, ದಿಲೀಪ್ ಚಂದಾ, ಮಲ್ಲಿಕಾರ್ಜುನ್ ಕಪಲಾಪುರೆ ಹಾಗೂ ಸುರೇಶ್ ಜೋಜನಾಕರ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News