×
Ad

ಬೆಳೆ ಪರಿಹಾರದ ಹಣವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ : ಸಚಿವ ಈಶ್ವರ್ ಖಂಡ್ರೆ

Update: 2025-12-21 19:19 IST

ಬೀದರ್ : ಜಿಲ್ಲೆಯ ರೈತರಿಗೆ ಕೇಂದ್ರ ಸರ್ಕಾರದ ಎನ್‍ ಡಿ ಆರ್ ಎಫ್ ಹಾಗೂ ಎಸ್‍ ಡಿ ಆರ್ ಎಫ್ ಮಾರ್ಗಸೂಚಿಯನ್ವಯ ಹಾಗೂ ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ ಘೋಷಿಸಲಾದ ಪರಿಹಾರ ಮೊತ್ತ ಸೇರಿ 17 ಹಂತಗಳಲ್ಲಿ ಒಟ್ಟು 1,86,426 ರೈತರಿಗೆ 261.43 ಕೋಟಿ ರೂ. ಪರಿಹಾರ ಜಮೆ ಮಾಡಲಾಗಿದೆ. 8,615 ರೈತರಿಗೆ ತಾಂತ್ರಿಕ ಕಾರಣದಿಂದ ಪರಿಹಾರ ಇನ್ನೂ ಬಿಡುಗಡೆಯಾಗಲಿಲ್ಲ. ಈ ಪರಿಹಾರ ಹಣ ಬಿಡುಗಡೆಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದರು.

ರವಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಬೆಳೆ ವಿಮೆ ಮತ್ತು ಇನ್ನಿತರೆ ವಿಷಯಗಳ ಕುರಿತು ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮುಂಗಾರು ಹಂಗಾಮಿನಲ್ಲಿ ಪ್ರವಾಹದಿಂದ ಬೆಳೆ ಹಾನಿಯಾದ ರೈತರಿಗೆ ಎನ್‍ಡಿಆರ್ ಎಫ್ ಹಾಗೂ ಎಸ್‍ಡಿಆರ್ ಎಫ್ ನಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಪ್ರತಿ ಹೇಕ್ಟರ್ ಗೆ ಮಳೆಯಾಶ್ರೀತ 8,500 ರೂ. ನೀರಾವರಿ ಬೆಳೆಗೆ 17,000 ರೂ. ಮತ್ತು ಬಹುವಾರ್ಷಿಕ ಬೆಳೆಗಳಿಗೆ 22,500 ರೂ. ಗಳಂತೆ ಬೆಳೆ ಹಾನಿಯಾದ ರೈತರಿಗೆ 10 ಹಂತಗಳಲ್ಲಿ ಒಟ್ಟು 1,76,382 ರೈತರಿಗೆ 127.16 ಕೋಟಿ ರೂ. ಪರಿಹಾರ ನೇರವಾಗಿ ರೈತರ ಬ್ಯಾಂಕ್ ಖಾತೆ ಜಮೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಘೋಷಿಸಲಾದ ಹೆಚ್ಚುವರಿ ಪರಿಹಾರ ಮೊತ್ತ 8,500 ರೂ. ಗಳು ಸಹ 7 ಹಂತಗಳಲ್ಲಿ ಒಟ್ಟು 1,86,426 ರೈತರಿಗೆ 134.27 ಕೋಟಿ ರೂ. ಪರಿಹಾರ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದರು.

ಬೀದರ್ ನ ರೇಷ್ಮೆ ಇಲಾಖೆಯ 25 ಎಕರೆ ಜಮೀನಿನಲ್ಲಿ ಭವ್ಯವಾದ 20 ಸಾವಿರ ಜನರ ಸಾರ್ಮಥ್ಯದ ಕ್ರೀಡಾಂಗಣ ಮಳಿಗೆ ನಿರ್ಮಿಸಲಾಗುವುದು. ಇದಕ್ಕೆ ಒಂದು ವಾರದೊಳಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳಿಸಲಾಗುವುದು. ಸಚಿವ ಸಂಪುಟದಲ್ಲಿ ಮಂಡಿಸಿ ಅನುಮತಿ ಪಡೆದು ಕೆ ಕೆ ಆರ್ ಡಿ ಬಿ ಅಡಿಯಲ್ಲಿ 25 ಕೋಟಿ ರೂ. ಅನುದಾನ ಪಡೆಯಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News