×
Ad

ಕಾಂಗ್ರೆಸ್ ಒಳ ಮೀಸಲಾತಿಯಿಂದ ಜಾತಿಗಳ ನಡುವೆ ಸಂಘರ್ಷ ಏರ್ಪಡಿಸಿದೆ : ಸಂಸದ ಗೋವಿಂದ ಕಾರಜೋಳ ಆರೋಪ

Update: 2025-12-21 19:24 IST

ಬೀದರ್, ಡಿ.21: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ದಲಿತರ ಮತ ಕಬಳಿಸಲು ಒಳ ಮೀಸಲಾತಿ ಜಾರಿ ಮಾಡುವುದಾಗಿ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿ ಇಲ್ಲಿಯವರೆಗೂ ಒಂದಿಲ್ಲೊಂದು ಗೊಂದಲ ಸೃಷ್ಟಿಸಿ ಜಾತಿ ಜಾತಿಗಳ ನಡುವೆ ಸಂಘರ್ಷ ಏರ್ಪಡಿಸಲು ವೇದಿಕೆ ಸಿದ್ದಪಡಿಸಿದೆ. ದಲಿತರಿಗೆ ಮಹಾ ಮೋಸ ಮಾಡಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಸಂಸದ ಗೋವಿಂದ ಕಾರಜೋಳ ಅವರು ಆರೋಪಿಸಿದರು.

ರವಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 1950ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 6, ಪರಿಶಿಷ್ಟ ಪಂಗಡದಲ್ಲಿ 3 ಜಾತಿಗಳನ್ನು ಮಾತ್ರ ಸೇರಿಸಲಾಗಿತ್ತು. ಆದರೆ ಈಗ ಎಸ್.ಸಿ ಜಾತಿಯಲ್ಲಿ 101 ಹಾಗೂ ಎಸ್ಟಿ ಜಾತಿಯಲ್ಲಿ 56 ಜಾತಿಗಳನ್ನು ಸೇರಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಹರಿಯಾಣ, ತೆಲಂಗಾಣ, ಪಂಜಾಬ್, ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಸರ್ಕಾರಗಳು ಒಳ ಮೀಸಲಾತಿ ಜಾರಿ ಮಾಡಿವೆ. ಆದರೆ ಇಲ್ಲಿಯ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುತ್ತಿಲ್ಲ ಎಂದರು.

ಆ.25 ರಂದು ಕ್ಯಾಬಿನೆಟ್‌ನಲ್ಲಿ ಒಳಮೀಸಲಾತಿ ಜಾರಿ ಮಾಡಿದರೂ ಒಂದಲ್ಲೊಂದು ಗೊಂದಲ ಸೃಷ್ಠಿ ಮಾಡಿಟ್ಟಿದ್ದಾರೆ. ಎ.ಕೆ, ಎ.ಡಿ ಅವರ ಮೀಸಲಾತಿ ಪ್ರಮಾಣ ಶೇ.1 ಇದ್ದದ್ದು ತೆಗೆದು ಅವರಿಗೆ ಅನ್ಯಾಯ ಎಸಗಲಾಗಿದೆ. 59 ಪಂಗಡಗಳು ತಮಗೆ ಮೋಸ ಆಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗೆ ದಿನಕ್ಕೊಬ್ಬರು ಕೋರ್ಟ್‌ಗೆ ಹೋಗಿ ಪರಸ್ಪರ ಜಗಳವಾಡಿದರೆ ತನಗೆ ಲಾಭವಾಗುವುದು ಎಂದು ಕಾಂಗ್ರೆಸ್ ಭಾವಿಸಿದೆ ಎಂದು ಅವರು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವ ಮಹಾದೇವಪ್ಪ ಅವರ ಅಣತಿಯಂತೆ ಸಿದ್ಧರಾಮಯ್ಯ ನಡೆದುಕೊಳ್ಳುತ್ತಿದ್ದಾರೆ. ಈ ತಿಂಗಳ 18ರಂದು ಬೆಳಗಾವಿ ಅಧಿವೇಶನದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಬಿಲ್ ಮಂಡಿಸಿ ಚರ್ಚೆ ಮಾಡದೇ ಪಾಸ್ ಮಾಡಿರುವುದು ಅತ್ಯಂತ ದುರಂತದ ಸಂಗತಿ. ಈ ಮಸೂದೆಯಲ್ಲಿ ಒಳ ಮೀಸಲಾತಿಯಂತೆ ನೇರ ನೇಮಕಾತಿ ಮಾಡಿ ಪದೋನ್ನತಿ ಮಾಡದೇ ಇರುವ ಮೂಲಕ ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ದಲಿತರನ್ನು ಸದಾ ಮೋಸ ಮಾಡುತ್ತ ಸಾಗಿದ್ದಾರೆ ಎಂದು ದೂರಿದರು.

ಈಗಾಗಲೇ ಸದಾಶಿವ ಆಯೋಗ ಜಾರಿ ಮಾಡದೆ ನಾಗಮೋಹನದಾಸ ಆಯೋಗ ರಚಿಸಲಾಗಿದೆ. ನಾಗಮೋಹನದಾಸ ವರದಿ ಅಥವಾ ನಮ್ಮ ಸರ್ಕಾರವಿದ್ದಾಗ ರಚನೆಯಾಗಿದ್ದ ಮಾಧುಸ್ವಾಮಿ ವರದಿಯಾದರೂ ಜಾರಿ ಮಾಡಲಿ. ಉಳಿದ ಯಾವುದೇ ವರದಿಗಳಿಗೆ ನಾವು ಒಪ್ಪುವುದಿಲ್ಲ ಎಂದು ಹೇಳಿದರು.

ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಮಾತನಾಡಿ, ಈ ಸರ್ಕಾರಕ್ಕೆ ದಲಿತರ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ. ದಲಿತರ ಮತ ಬೇಕು ಆದರೆ ಅವರ ಏಳಿಗೆ ಬೇಕಿಲ್ಲ. ದಲಿತ ಸಿಎಂ ಮಾಡುವ ಪ್ರಸಂಗ ಬಂದಾಗ ಪರಸ್ಪರ ಕಚ್ಚಾಟ ಮಾಡಿ ಜನರಿಗೆ ಮರಳು ಮಾಡುವ ಗೋಜಿಗೆ ಹೋಗುವ ಈ ಸರ್ಕಾರಕ್ಕೆ ಮುಂಬರುವ 2028ರ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಯಲ್ಲಿ ಜನ ತಕ್ಕ ಪಠ ಕಲಿಸಬೇಕಿದೆ ಎಂದು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್, ಜಿಲ್ಲಾಧ್ಯಕ್ಷ ವಿಜಯಕುಮಾರ್ ಹಿಪ್ಪಳಗಾಂವ್, ಜಿಲ್ಲಾ ಉಪಾಧ್ಯಕ್ಷ ಕಮಲಾಕರ್ ಹೆಗಡೆ, ಸಮಿತಿ ಇತರೆ ಪದಾಧಿಕಾರಿಗಳಾದ ಶಿವಣ್ಣ ಹಿಪ್ಪಳಗಾಂವ್, ಹರೀಶ್ ಗಾಯಕವಾಡ್, ದೇವದಾಸ್ ಹಿಪ್ಪಳಗಾಂವ್ ಹಾಗೂ ಸನ್ನಿ ವಕೀಲಸಾಬ್ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News