ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಿ : ಸಚಿವ ಈಶ್ವರ್ ಖಂಡ್ರೆ
ಮಕ್ಕಳಿಗೆ ಪೋಲಿಯೋ ಹನಿ ನೀಡುವ ಮೂಲಕ ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಸಚಿವರಿಂದ ಚಾಲನೆ
ಬೀದರ್ : ನಮ್ಮ ರಾಷ್ಟ್ರದಲ್ಲಿ ಪೋಲಿಯೋ ಸಂಪೂರ್ಣ ನಿರ್ಮೂಲನೇ ಆಗಿದೆ. ಆದರೆ ಪೋಲಿಯೋ ವೈರಸ್‍ನಿಂದ ಅಂಗವೈಕಲ್ಯತೆಗೆ ಒಳಗಾಗದಂತೆ ಮುನ್ನೆಚ್ಚರಿಕೆಗಾಗಿ ಜಿಲ್ಲೆಯ ಸಾರ್ವಜನಿಕರು ತಮ್ಮ ನವಜಾತ ಶಿಶುವಿನಿಂದ ಹಿಡಿದು 5 ವರ್ಷದೊಳಗಿನ ಮಕ್ಕಳಿಗೆ ಬೂತ್ ಮಟ್ಟದಲ್ಲಿ ಕರೆತಂದು ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದರು.
ರವಿವಾರ ಬೀದರ್ ನಗರದ ಓಲ್ಡ್ ಸಿಟಿಯ ಗವಾನ್ ಚೌಕ್ ಹತ್ತಿರವಿರುವ ಓಯಸ್ಟರ್ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ಆವರಣದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ 0-5 ವರ್ಷದ ಒಳಗಿನ ಮಕ್ಕಳಿಗೆ 'ರಾಷ್ಟ್ರೀಯ ಪಲ್ಸ್ ಪೋಲಿಯೋ' ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೋಲಿಯೋ ಹನಿ ನೀಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಡಿ.22 ರಿಂದ 24ರ ವರೆಗೆ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುವ ಮೂಲಕ ಬಿಟ್ಟು ಹೋದ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುತ್ತಾರೆ. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಮಕ್ಕಳು ಆರೋಗ್ಯವಂತರಾಗಿರಬೇಕು. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಂಡು ಕಾರ್ಯಕ್ರಮ ಪ್ರತಿಶತ ಗುರಿಸಾಧಿಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೀದರ್ ಮಹಾನಗರ ಪಾಲಿಕೆಯ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ರಾಜ್ಯ ಪಲ್ಸ್ ಪೋಲಿಯೋ ನೋಡಲ್ ಅಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ್ ನೀರಗುಡೆ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಶಿವಶಂಕರ್ ಭತಮುರ್ಗೆ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಮಂಜೂರ್ ಇರ್ಫಾನ್, ಡಾ. ರಾಜಶೇಖರ್ ಪಾಟೀಲ್, ಡಾ. ಶಂಕ್ರೆಪ್ಪಾ ಬೊಮ್ಮಾ, ಡಾ. ಅನೀಲ್ ಚಿಂತಾಮಣಿ, ಡಾ. ದಿಲಿಪ್ ಡೊಂಗರೆ, ಡಾ. ಕಿರಣ್ ಪಾಟೀಲ್, ತಾಲೂಕಾ ಆರೋಗ್ಯ ಅಧಿಕಾರಿ ಡಾ. ಸಂಗರೆಡ್ಡಿ ಹಾಗೂ ನೂರು ಹಾಸಿಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಹಮ್ಮದ್ ಸೋಹೆಲ್ ಸೇರಿದಂತೆ ಇತರರು ಇದ್ದರು.