×
Ad

Bidar | ಕಳಪೆ ಬಿತ್ತನೆ ಬೀಜ ವಿತರಿಸಿದರೆ ಕ್ರಮ : ಸಿದ್ರಾಮಯ್ಯ ಸ್ವಾಮಿ

Update: 2026-05-15 17:19 IST

ಬೀದರ್ : ಜಿಲ್ಲೆಯ ರೈತರಿಗೆ ವಿತರಿಸಲಾಗುವ ಬಿತ್ತನೆ ಬೀಜಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು. ಉತ್ತಮ ಮೊಳಕೆ ಬರುವ ಗುಣಮಟ್ಟದ ಬೀಜಗಳನ್ನು ಮಾತ್ರ ರೈತರಿಗೆ ವಿತರಿಸಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗುರುವಾರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಕರ್ನಾಟಕ ಪ್ರದೇಶ ಕೃಷಿ ಸಮಾಜ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತ ಸಂಪರ್ಕ ಕೇಂದ್ರಗಳಿಗೆ ಆಗಮಿಸುವ ಬಿತ್ತನೆ ಬೀಜಗಳನ್ನು ಮೊದಲು ಮಾದರಿ ಪರೀಕ್ಷೆಗೆ ಒಳಪಡಿಸಿ, ಉತ್ತಮ ಮೊಳಕೆ ಬರುವ ಬೀಜಗಳನ್ನು ಮಾತ್ರ ವಿತರಿಸಬೇಕು. ಕಳಪೆ ಗುಣಮಟ್ಟದ ಬೀಜಗಳನ್ನು ತಕ್ಷಣವೇ ವಾಪಸ್ ಕಳುಹಿಸುವಂತೆ ಸೂಚಿಸಿದರು. ಬೀಜ ವಿತರಣೆ ವೇಳೆ ರೈತರಿಗೆ ಯಾವುದೇ ಗೊಂದಲ ಅಥವಾ ತೊಂದರೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಮಾತನಾಡಿ, ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಂಗ್ರಹ ಪ್ರಕ್ರಿಯೆ ಆರಂಭವಾಗಿದೆ. ರೈತರು ಅವಸರದಲ್ಲಿ ಬಿತ್ತನೆ ಮಾಡದೆ, ಕನಿಷ್ಠ 60 ರಿಂದ 70 ಮಿ.ಮೀ ಮಳೆಯಾಗಿ ಮಣ್ಣಿನಲ್ಲಿ ಸಮರ್ಪಕ ತೇವಾಂಶ ಬಂದ ಬಳಿಕವೇ ಬಿತ್ತನೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಅಧಿಕೃತ ರೈತ ಸಂಪರ್ಕ ಕೇಂದ್ರಗಳಿಂದಲೇ ಬೀಜ ಹಾಗೂ ರಸಗೊಬ್ಬರ ಖರೀದಿಸಿ, ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಸಾಕಷ್ಟು ರಸಗೊಬ್ಬರ ಲಭ್ಯವಿದ್ದು, ರೈತರು ಒಂದೇ ಬಾರಿ ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿ ಸಂಗ್ರಹಿಸಿಡುವ ಅಗತ್ಯವಿಲ್ಲ ಎಂದರು.

ಎಫ್‌ಐಡಿ ಮಾಡಿಸಿರುವ ರೈತರಿಗೆ ಮಾತ್ರ ಯುರಿಯಾ ಗೊಬ್ಬರ ವಿತರಿಸಲಾಗುವುದು. ಡಿಎಪಿ ಗೊಬ್ಬರದ ಬದಲಿಗೆ ಲಭ್ಯವಿರುವ ಕಾಂಪ್ಲೆಕ್ಸ್ ಗೊಬ್ಬರಗಳನ್ನು ಬಳಸುವಂತೆ ತಾಂತ್ರಿಕ ಸಲಹೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ರೈತಪರ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಮೇ 31ರಿಂದ ಜೂನ್ 2ರೊಳಗೆ ಮಳೆಯಾಗುವ ಸಾಧ್ಯತೆ ಇದ್ದು, ಜೂನ್ 8ರ ಸುಮಾರಿಗೆ ಜಿಲ್ಲೆಗೆ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗೋವಿಂದ್ ರೆಡ್ಡಿ, ಸಂಗಮೇಶ್ ವಾಲೆ, ವಿಶ್ವನಾಥ್ ಮಾಲಿ ಪಾಟೀಲ್, ಬಾಬುರೆಡ್ಡಿ, ಸಂತೋಷ್ ಹಜಾರಿ, ವಿಠಲಸಿಂಗ್, ರಮೇಶ್ ಪಾಟೀಲ್, ಗೀರಿಶ್ ಪಾಟೀಲ್, ಪ್ರಭುರಾವ್, ಬಸವರಾಜ್ ಪಾಟೀಲ್ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News