ಬೀದರ್ ವಿಶ್ವವಿದ್ಯಾಲಯದ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಮನವಿ

Update: 2026-08-07 18:23 IST

ಬೀದರ್, ಆ.8: ಹಾಲಹಳ್ಳಿ ಸಮೀಪದ ಬೀದರ್ ವಿಶ್ವವಿದ್ಯಾಲಯದಲ್ಲಿ ವಿವಿಧ ಸಮಸ್ಯೆಗಳು ತಲೆದೋರಿದ್ದು, ಅವುಗಳನ್ನು ತಕ್ಷಣವೇ ಪರಿಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪರಿವರ್ತನ ಸಂಘದ ಪದಾಧಿಕಾರಿಗಳು ಕುಲಪತಿಗೆ ಮನವಿ ಸಲ್ಲಿಸಿದರು.

ಗುರುವಾರ ಸಲ್ಲಿಸಿದ ಮನವಿಯಲ್ಲಿ, ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ಹಾಗೂ ಪ್ರವೇಶ ಶುಲ್ಕವನ್ನು ಹೆಚ್ಚಿಸಲಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶುಲ್ಕವನ್ನು ಕೂಡಲೇ ಕಡಿಮೆಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ಪ್ರಶ್ನೆ ಪತ್ರಿಕೆಗಳ ಮುದ್ರಣಕ್ಕೆ ಹಣ ಬಿಡುಗಡೆ ಮಾಡಿ ಟೆಂಡರ್ ನೀಡಿದ್ದರೂ ಮುದ್ರಿತ ಪ್ರಶ್ನೆ ಪತ್ರಿಕೆಗಳು ಪರೀಕ್ಷಾ ಕೇಂದ್ರಗಳಿಗೆ ತಲುಪದೆ, ಜೆರಾಕ್ಸ್ ಪ್ರತಿಗಳನ್ನು ವಿತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಕ್ರೀಡಾ ವಿಭಾಗಕ್ಕೆ ಸಮರ್ಪಕ ಪ್ರೋತ್ಸಾಹ ನೀಡದ ಕಾರಣ ಪ್ರತಿಭಾವಂತ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಲಾಗಿದೆ.

ವಿಶ್ವವಿದ್ಯಾಲಯ ವ್ಯಾಪ್ತಿಯ ಸುಮಾರು 24 ಬಿ.ಎಡ್. ಕಾಲೇಜುಗಳಲ್ಲಿ 20 ಕಾಲೇಜುಗಳು ಮುಕ್ತ ವಿಶ್ವವಿದ್ಯಾಲಯದ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೆ ನೇರವಾಗಿ ಪರೀಕ್ಷೆಗೆ ಹಾಜರಾಗುತ್ತಿರುವುದು, ಗೈರುಹಾಜರಾಗಿದ್ದ ವಿದ್ಯಾರ್ಥಿಗಳ ನಕಲಿ ಸಹಿ ಪಡೆದು ಹಣ ಪಡೆದು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತಿದೆ ಎಂಬ ಆರೋಪವೂ ಮನವಿಯಲ್ಲಿ ಮಾಡಲಾಗಿದೆ.

ಕೆಲವು ಅತಿಥಿ ಉಪನ್ಯಾಸಕರು ನಕಲಿ ಪಿಎಚ್.ಡಿ. ಪದವಿ ಪ್ರಮಾಣಪತ್ರಗಳ ಆಧಾರದ ಮೇಲೆ ನೇಮಕಗೊಂಡಿರುವ ಶಂಕೆ ವ್ಯಕ್ತಪಡಿಸಿ, ಅವರ ಪದವಿ ಪ್ರಮಾಣಪತ್ರಗಳ ಪರಿಶೀಲನೆ ನಡೆಸಬೇಕು. ಜೊತೆಗೆ ಡಿಜಿಟಲ್ ಮೌಲ್ಯಮಾಪನ ಪದ್ಧತಿಯನ್ನು ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಲಾಗಿದೆ.

ಈ ಎಲ್ಲ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಎರಡು ದಿನಗಳೊಳಗೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ವಿಶ್ವವಿದ್ಯಾಲಯ ಆವರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ಪರಿವರ್ತನ ಸಂಘ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಪವನಕುಮಾರ್ ಮಿಠಾರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾವ್ ಮಾಲಗತ್ತಿ, ನಾಗಸೇನಾ ಗಾಯಕವಾಡ್, ಮಹೇಶ್ ಭಾವಿದೊಡ್ಡಿ ಹಾಗೂ ನಿತೀಶ್ ಸಿಂಧೆ ಸೇರಿದಂತೆ ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News