×
Ad

ಬೀದರ್ | ಎಸ್‌ಐಆರ್‌ನಿಂದ ರಕ್ತರಹಿತ ನರಮೇಧ : ಪರಕಾಲ ಪ್ರಭಾಕರ್

ಎಸ್‌ಐಆರ್ ಚಿಂತನ-ಮಂಥನ ಸಮಾವೇಶ

Update: 2026-02-03 23:41 IST

ಬೀದರ್ : ಇಂದಿನ ಭಾರತದಲ್ಲಿ ನಾಗರಿಕರನ್ನು ದೇಶದಿಂದ ಹೊರಹಾಕಲು ಸಾಧ್ಯವಿಲ್ಲ. ಹಾಗೆಯೇ ಹೊಡೆದು ಹಾಕಲು ಕೂಡ ಕಷ್ಟವಿದೆ. ಹಾಗಾಗಿ ಸರಕಾರ ಎಸ್‌ಐಆರ್ ಮೂಲಕ ರಕ್ತರಹಿತ ನರಮೇಧಕ್ಕಿಳಿದಿದೆ ಎಂದು ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಎಸ್‌ಐಆರ್ ಬಗ್ಗೆ ನಗರದ ಡಾ. ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಮಂಗಳವಾರ ಚಿಂತನ-ಮಂಥನ ಸಮಾವೇಶದಲ್ಲಿ ಅವರು ಮಾತನಾಡಿದರು.

ನಾವು ಎಷ್ಟು ದಿನ ಇಂತಹ ಚರ್ಚೆ, ಕಾರ್ಯಕ್ರಮ ಮಾಡುತ್ತೇವೆಯೋ ಗೊತ್ತಿಲ್ಲ. ಇನ್ನು ಎಷ್ಟು ವರ್ಷಗಳಲ್ಲಿ ಕೆಂಪು ಕೋಟೆ ಮೇಲೆ ರಾಷ್ಟ್ರ ಧ್ವಜ ಹಾರಿಸುತ್ತೇವೋ ಗೊತ್ತಿಲ್ಲ. ಬಹುಶಃ ಈ ವರ್ಷ ಹಾರಿಸಬಹುದು. ಆದರೆ ಮುಂದಿನ ವರ್ಷ ಹಾರಿಸಲಾಗುತ್ತದೆ ಎಂದು ನನಗೆ ಹೇಳಲಾಗುವುದಿಲ್ಲ. ಧ್ವಜ ಹಾರಿಸಲಾಗುವುದು, ಆದರೆ ಅದು ತಿರಂಗಾ ಆಗಿರುತ್ತದೋ ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಭಾರತದಲ್ಲಿ ಎಸ್‌ಐಆರ್‌ನ ಎರಡನೇ ಹಂತದಲ್ಲಿ 6.5 ಕೋಟಿ ಜನರು ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದಾರೆ. ಆದರೆ ಇದು ಸಣ್ಣ ಸಂಖ್ಯೆಯಲ್ಲ, ಜಗತ್ತಿನ ಶೇ. 85ರಷ್ಟು ದೇಶಗಳಲ್ಲಿ ಇಷ್ಟೊಂದು ಸಂಖ್ಯೆಯ ಜನ ಬದುಕುತ್ತಿದ್ದಾರೆ. ಈ ಎಸ್‌ಐಆರ್ ಮುಗಿಯುವ ವೇಳೆಗೆ 16.5 ಕೋಟಿ ಜನರ ಮತದಾನದ ಹಕ್ಕನ್ನು ರದ್ದುಗೊಳಿಸಲಾಗುತ್ತದೆ. ದೇಶದಲ್ಲಿ ನಾಗರಿಕತೆಯ ಹತ್ಯೆಯಾಗುತ್ತಿದ್ದು, ಆದರೆ ರಕ್ತ ಹರಿಯುತ್ತಿಲ್ಲ ಎಂದು ಪ್ರಭಾಕರ್ ತಿಳಿಸಿದರು.

ಭಾರತ ದೇಶ ಇಸ್ರೇಲೀಕರಣ ಆಗುತ್ತಿರುವುದು ಖಚಿತವಾಗುತ್ತಿದೆ. ಇದರ ವಿರುದ್ಧ ಯಾವುದೇ ಪಕ್ಷಗಳು ಧ್ವನಿ ಎತ್ತುವುದಿಲ್ಲ. ಇದರ ವಿರುದ್ಧ ಜನರು ಬೀದಿಗಿಳಿಯಬೇಕಾಗಿದೆ. ಆವಾಗ ಮಾತ್ರ ಇದನ್ನು ತಡೆಯಲು ಸಾಧ್ಯ ಎಂದು ಅವರು ನುಡಿದರು.

ಖ್ಯಾತ ಅಂಕಣಕಾರ, ಚಿಂತಕ ಶಿವಸುಂದರ್ ಮಾತನಾಡಿ, ಕೆಲ ವರ್ಷಗಳಿಂದ ಸಂವಿಧಾನದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಆ ದಾಳಿ ಈಗ ಕೊನೆ ಹಂತಕ್ಕೆ ಬಂದು ತಲುಪಿದೆ. ಆ ದಾಳಿಯ ಒಂದು ಪ್ರಮುಖ ಭಾಗವೇ ಈ ಎಸ್‌ಐಆರ್ ಎಂದರು.

ನಾಗರಿಕ ಹಕ್ಕುಗಳ ಪ್ರತಿಪಾದಕಿ ತಾರಾ ರಾವ್ ಮಾತನಾಡಿ, ನಾವೆಲ್ಲರೂ ಈಗ ಮಾತನಾಡಿ ಕುಗ್ಗಿದ್ದೇವೆ. ಮಾತಾಡುವುದರ ಜೊತೆಗೆ ನಾವು ಹೋರಾಟ ಮಾಡಬೇಕಾಗಿದೆ. ಎಸ್‌ಐಆರ್ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿ ಜಯ ಗಳಿಸಬೇಕಿದೆ ಎಂದರು.

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - Reshma

contributor

Similar News