ಮೊಳಕೇರಾ ಗ್ರಾಮದಲ್ಲಿ ಆಕಸ್ಮಿಕ ಸ್ಪೋಟ: ಸ್ಥಳಕ್ಕೆ ಸಚಿವ ಈಶ್ವರ ಬಿ.ಖಂಡ್ರೆ ಭೇಟಿ ನೀಡಿ ಪರಿಶೀಲನೆ
ಹುಮನಾಬಾದ್: ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ಸಂಭವಿಸಿದ ಅನುಮಾನಾಸ್ಪದ ವಸ್ತು ಸ್ಫೋಟಗೊಂಡ ಘಟನಾ ಸ್ಥಳಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಘಟನೆ ಕುರಿತು ವಿವರವಾದ ಮಾಹಿತಿ ಪಡೆದು ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಮೇಲ್ನೋಟಕ್ಕೆ ಮನೆಯ ಮುಂಭಾಗದಲ್ಲಿ ರಾಸಾಯನಿಕ ಮಿಶ್ರಿತ ವಸ್ತುಗಳನ್ನು ಶೇಖರಣೆ ಮಾಡಿರುವುದರಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ. ಘಟನೆ ಕುರಿತು ಸಮಗ್ರ ತನಿಖೆ ನಡೆಯುತ್ತಿದ್ದು, ಸಂಪೂರ್ಣ ತನಿಖಾ ವರದಿ ಬಂದ ತಕ್ಷಣ ವರದಿ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದಲ್ಲಿ ಯಾರೇ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಲೋಪ ಕಂಡು ಬಂದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ವೇಳೆ ಸಚಿವರು ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಕೆಮಿಕಲ್ ತ್ಯಾಜ್ಯದಿಂದ ಗ್ರಾಮದ ಸುತ್ತಲಿನ ವಾತಾರಣ, ಹವಾಮಾನ ಕಲುಷಿತಗೊಳ್ಳುತ್ತಿದೆ ಎಂದು ಸಚಿವರಿಗೆ ಗ್ರಾಮಸ್ಥರು ದೂರು ಸಲ್ಲಿಸಿದರು. ರಾಜ್ಯ ಪರಿಸರ ಇಲಾಖೆಯಿಂದ ಒಂದು ತಂಡವನ್ನು ಕರೆಸಿ ತನಿಖೆ ನಡೆಸಿ ತಪಿಸ್ಥರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಸಚಿವರು ಭರವಸೆ ನೀಡಿದರು.
ಇಂತಹ ದುರ್ಘಟನೆಗಳು ಮರುಕಳಿಸದಂತೆ ಸಂಬಂಧಿತ ಇಲಾಖೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಘಟನೆಯಿಂದ ಯಾರೂ ಭಯಪಡುವ ಅಗತ್ಯವಿಲ್ಲ. ಈಗಾಗಲೇ ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು, ಈ ಘಟನೆಯಲ್ಲಿ ಯಾರೇ ಶಾಮಿಲಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಹುಮನಾಬಾದ್ ಶಾಸಕ ಡಾ.ಸಿದ್ಧಲಿಂಗ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಬಿ.ಪಾಟೀಲ್, ಮಾಜಿ ಶಾಸಕ ರಾಜಶೇಖರ್ ಬಿ.ಪಾಟೀಲ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಗೂ ಹುಮನಾಬಾದ್ ತಹಸೀಲ್ದಾರ್ ಅಜುಂ ತಬಸುಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.