ಔರಾದ್ | ಆಹಾರ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ : ಅಧಿಕಾರಿಗಳ ಅಮಾನತಿಗೆ ಮನವಿ
ಬೀದರ್ : ಔರಾದ್ ತಾಲ್ಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ದಲ್ಲಾಳಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೈಜೋಡಿಸಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಒತ್ತಾಯಿಸಿದೆ.
ಸೋಮವಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಹೊಸ ಪಡಿತರ ಚೀಟಿ ನೀಡಲು ಅರ್ಜಿದಾರರಿಂದ 3 ರಿಂದ 5 ಸಾವಿರ ರೂಪಾಯಿ ವರೆಗೆ ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಹಣ ನೀಡುವವರಿಗೆ ಮಾತ್ರ ಪಡಿತರ ಚೀಟಿ ಮಂಜೂರು ಮಾಡಲಾಗುತ್ತಿದ್ದು, ಬಡವರು ಹಣ ನೀಡಲು ಅಸಮರ್ಥರಾದರೆ ವಿವಿಧ ನೆಪ ಹೇಳಿ ಅವರ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂದು ದೂರಲಾಗಿದೆ.
ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೇ ಪಡಿತರ ಚೀಟಿಗಳನ್ನು ಮಂಜೂರು ಮಾಡುತ್ತಿದ್ದು, ಕೆಲವು ಆನ್‌ಲೈನ್ ಕೇಂದ್ರಗಳ ಮಾಲೀಕರ ಸಹಾಯದಿಂದ ಲಂಚ ಸಂಗ್ರಹಿಸಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಕೆಲ ಅಧಿಕಾರಿಗಳು ತಮ್ಮ ಹಾಗೂ ತಮ್ಮ ಪತ್ನಿಯ ಹೆಸರಿನಲ್ಲಿ ಪಡಿತರ ಚೀಟಿಗಳನ್ನು ಹೊಂದಿದ್ದು, ಕುಟುಂಬ ಸದಸ್ಯರ ಹೆಸರಿನಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಯಾವುದೇ ನೋಟಿಸ್ ಪ್ರಕಟಿಸದೇ ಹಾಗೂ ಮಾಧ್ಯಮಗಳಲ್ಲಿ ಪ್ರಕಟಣೆ ನೀಡದೇ ಅಕ್ರಮವಾಗಿ ಅನುಮತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳು ಫಲಾನುಭವಿಗಳಿಂದ ಸುಮಾರು 3 ಸಾವಿರ ರೂಪಾಯಿ ಹಣವನ್ನು ತಾಲೂಕು ಆಹಾರ ಇಲಾಖೆಗೆ ನೀಡುವಂತೆ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ತಿಂಗಳಿಗೆ ಸುಮಾರು 3 ಲಕ್ಷ ರೂಪಾಯಿಗೂ ಅಧಿಕ ಹಣ ಅಕ್ರಮವಾಗಿ ಸಂಗ್ರಹವಾಗುತ್ತಿದೆ ಎಂದು ತಿಳಿಸಲಾಗಿದೆ.
ಈ ಕುರಿತು ಈಗಾಗಲೇ ತಹಸೀಲ್ದಾರ್ ಅವರಿಗೆ ದೂರು ನೀಡಿದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದಕ್ಕೆ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಹೀಗಾಗಿ, ಸಾರ್ವಜನಿಕರ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಉಪ ನಿರ್ದೇಶಕರ ಕಚೇರಿ ಎದುರು ಸಾಂಕೇತಿಕ ಸತ್ಯಾಗ್ರಹ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಎಚ್ಚರಿಕೆ ನೀಡಿದೆ.