ಬೀದರ್ | 15ನೇ ಹಣಕಾಸು ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ಪಂಚಾಯತ್ ಅಧಿಕಾರಿಗಳ ಅಮಾನತಿಗೆ ಒತ್ತಾಯ
ಬೀದರ್ : ಚಿಟಗುಪ್ಪಾ ತಾಲ್ಲೂಕಿನ ಮುಸ್ತರಿ ಹಾಗೂ ಇಟಗಾ ಗ್ರಾಮ ಪಂಚಾಯತಿಗಳಲ್ಲಿ 15ನೇ ಹಣಕಾಸು ಯೋಜನೆಯಡಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ತಪ್ಪಿತಸ್ಥ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಸಂತೋಷ್ ಒತ್ತಾಯಿಸಿದ್ದಾರೆ.
ಸೋಮವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಮುಸ್ತರಿ ಗ್ರಾಮ ಪಂಚಾಯತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿರಿಸಿದ ಅನುದಾನವನ್ನು ಯಾವುದೇ ಕಾಮಗಾರಿ ಕೈಗೊಳ್ಳದೇ ನಕಲಿ ಬಿಲ್ಲುಗಳ ಮೂಲಕ ದೂರುಪಯೋಗ ಮಾಡಲಾಗಿದೆ ಎಂದು ದೂರಿದ್ದಾರೆ.
ಅಲ್ಲದೆ, ಗ್ರಾಮ ಪಂಚಾಯತಿಗೆ ಲಭ್ಯವಾಗುವ ಅನುದಾನದಲ್ಲಿ ಶೇ.5ರಷ್ಟು ವಿಶೇಷ ಚೇತನರಿಗಾಗಿ ಮೀಸಲಿರಿಸಿದ ಹಣವನ್ನು ಕೂಡ ಯಾವುದೇ ಕಾಮಗಾರಿ ನಡೆಸದೇ ನಕಲಿ ಬಿಲ್ಲು ಸೃಷ್ಟಿಸಿ ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆರೋಪಿಸಲಾಗಿದೆ.
ಇದೇ ರೀತಿಯಲ್ಲಿ ಇಟಗಾ ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸು ಯೋಜನೆ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಹಾಗೂ ಶೇ.25ರ ಬಟವಾಡೆ ಅನುದಾನದಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಕಂಡು ಬಂದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮುಸ್ತರಿ ಗ್ರಾಮ ಪಂಚಾಯತಿಯಲ್ಲಿ ಕೂಡ 15ನೇ ಹಣಕಾಸು ಯೋಜನೆ, ಉದ್ಯೋಗ ಖಾತ್ರಿ ಯೋಜನೆ, ಶೇ.25ರ ಬಟವಾಡೆ ಅನುದಾನ ಹಾಗೂ ಸಣ್ಣಪುಟ್ಟ ಖರೀದಿಗಳ ದಾಖಲೆಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದು ಆರೋಪಿಸಲಾಗಿದೆ.
ಹೀಗಾಗಿ, ಇಟಗಾ ಹಾಗೂ ಮುಸ್ತರಿ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ ಸಮಗ್ರ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಂತೋಷ್ ಅವರು ಒತ್ತಾಯಿಸಿದ್ದಾರೆ.