Bidar | ಪೇಂಟಿಂಗ್‌ನಲ್ಲಿ ಬಳಸುವ ಕೆಮಿಕಲ್‌ನಿಂದಾಗಿ ಸ್ಪೋಟ ಸಂಭವಿಸಿದೆ : ಎಸ್ಪಿ ಪ್ರದೀಪ್ ಗುಂಟಿ
ಬೀದರ್ : ಹುಮನಾಬಾದ್ ತಾಲ್ಲೂಕಿನ ಮೊಳಕೇರಾ ಗ್ರಾಮದಲ್ಲಿ ಪೇಂಟಿಂಗ್‌ನಲ್ಲಿ ಶೈನಿಂಗ್‌ಗಾಗಿ ಬಳಸುವ ಕೆಮಿಕಲ್ ತುಂಬಿದ್ದ ಬ್ಯಾರೆಲ್ ಅನ್ನು ಅಲುಗಾಡಿಸುವ ವೇಳೆ ಸ್ಫೋಟ ಸಂಭವಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.
ಶನಿವಾರ ಬೆಳಿಗ್ಗೆ 8.30ರ ಸುಮಾರಿಗೆ ಸ್ಫೋಟ ಸಂಭವಿಸಿದ ಬಗ್ಗೆ ಮಾಹಿತಿ ಲಭಿಸಿತು. ಬ್ಯಾರೆಲ್‌ನಲ್ಲಿ ಕೆಮಿಕಲ್ ಇರುವ ಪೇಂಟ್ ಹಾಕಿ ಅಲುಗಾಡಿಸುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ಅವರು ತಿಳಿಸಿದರು.
ಈ ಸ್ಫೋಟದಲ್ಲಿ ಒಟ್ಟು 8 ಮಂದಿ ಗಾಯಗೊಂಡಿದ್ದು, ಅವರಲ್ಲಿ 6 ಮಕ್ಕಳು ಮತ್ತು 2 ವಯಸ್ಕರು ಸೇರಿದ್ದಾರೆ. ಮಕ್ಕಳಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ವಯಸ್ಕರನ್ನು ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ ಹಾಗೂ ಸೊಲ್ಲಾಪುರಕ್ಕೆ ರವಾನಿಸಲಾಗಿದೆ ಎಂದು ಎಸ್ಪಿ ವಿವರಿಸಿದರು.
ಘಟನಾ ಸ್ಥಳಕ್ಕೆ ಪೊಲೀಸ್ ಹಾಗೂ ಫಾರೆನ್ಸಿಕ್ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ. ಪ್ರಾಥಮಿಕ ಮಾಹಿತಿ ಪ್ರಕಾರ, ಗ್ರಾಮದಲ್ಲಿ ಕೆಲವರು ಪೇಂಟಿಂಗ್ ಹಾಗೂ ಫೈಬರ್ ಡೋಸ್ ಸಂಬಂಧಿತ ಕೆಲಸಗಳನ್ನು ಮಾಡುತ್ತಿದ್ದು, ಮನೆಗಳಲ್ಲಿ ಪೇಂಟ್ ರೆಸಿಡ್ಯೂ ಹಾಗೂ ವಿವಿಧ ಕೆಮಿಕಲ್ಸ್ ಸಂಗ್ರಹಿಸಿದ್ದನ್ನು ಪತ್ತೆ ಹಚ್ಚಲಾಗಿದೆ. ಅವಧಿ ಮೀರಿದ ಕೆಮಿಕಲ್‌ಗಳನ್ನು ಸಂಗ್ರಹಿಸಿದ್ದರಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಫಾರೆನ್ಸಿಕ್ ತಂಡವು ಶಂಕೆ ವ್ಯಕ್ತಪಡಿಸಿದೆ. ಈ ಸ್ಫೋಟಕ್ಕೆ ಕೆಮಿಕಲ್‌ಗಳೇ ಕಾರಣ ಎಂಬುದು ಪ್ರಾಥಮಿಕವಾಗಿ ತಿಳಿದು ಬಂದಿದ್ದು, ಘಟನೆಯ ಕುರಿತು ಇನ್ನೂ ತನಿಖೆ ಮುಂದುವರಿದಿದೆ. ಸಂಪೂರ್ಣ ತನಿಖಾ ವರದಿ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ ಎಂದು ಎಸ್ಪಿ ಪ್ರದೀಪ್ ಗುಂಟಿ ಹೇಳಿದರು.