Bidar | ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಮಾರಾಟ ತಡೆದು ಪುನರಾರಂಭಕ್ಕೆ ಆಗ್ರಹ
ಬೀದರ್: ಜಿಲ್ಲೆಯ ರೈತರ ಜೀವನಾಡಿಯಾಗಿರುವ ಹಳ್ಳಿಖೇಡ್ (ಬಿ)ಯ ಬಿಎಸ್‌ಎಸ್‌ಕೆ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡದೆ, ಸರ್ಕಾರವೇ ವಹಿಸಿಕೊಂಡು ಪುನರಾರಂಭಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಬಿಎಸ್‌ಎಸ್‌ಕೆ ಕಾರ್ಮಿಕರ ಸಂಘ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಸಹಕಾರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಸಹಕಾರಿ ವಲಯದಲ್ಲಿ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದ್ದ ಬಿಎಸ್‌ಎಸ್‌ಕೆ ಕಾರ್ಖಾನೆ ಬೀದರ್ ಜಿಲ್ಲೆಯ ರೈತರ ಪ್ರಮುಖ ಆಧಾರವಾಗಿದ್ದು, ಕಾರ್ಖಾನೆಯನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ ಆಡಳಿತ ಮಂಡಳಿಯ ದುರಾಡಳಿತದಿಂದ ಸರ್ಕಾರದ ಅನುಮತಿಯಿಲ್ಲದೆ ಕಾರ್ಖಾನೆಯನ್ನು ಅಕ್ರಮವಾಗಿ ಮುಚ್ಚಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಕಾರ್ಖಾನೆಯ ಮೇಲೆ 241.44 ಕೋಟಿ ರೂ. ಮೂಲ ಸಾಲ ಹಾಗೂ 189.40 ಕೋಟಿ ರೂ. ಬಡ್ಡಿ ಸೇರಿದಂತೆ ಒಟ್ಟು 430.84 ಕೋಟಿ ರೂ. ಸಾಲವಿದೆ ಎಂದು ತಿಳಿಸಲಾಗಿದ್ದು, ಕಾರ್ಖಾನೆಯ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಸಹಕಾರಿ ವಲಯದ ಬಿಎಸ್‌ಎಸ್‌ಕೆ ಕಾರ್ಖಾನೆಯನ್ನು ಮಾರಾಟ ಮಾಡಲು ಸಂಬಂಧಪಟ್ಟ ಸಂಸ್ಥೆ ನಿರ್ಧರಿಸಿರುವುದು ಖಂಡನೀಯ. ರೈತರ ಷೇರು ಹಣ ಹಾಗೂ ಕಾರ್ಖಾನೆಯ ಭೂಮಿಯನ್ನು ಪಟ್ಟಭದ್ರ ಹಿತಾಸಕ್ತಿಗಳು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿರುವ ಸಂಘಟನೆಗಳು, ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು ಮಾರಾಟ ಮಾಡಬಾರದು. ಸರ್ಕಾರವೇ ಕಾರ್ಖಾನೆಯನ್ನು ವಹಿಸಿಕೊಂಡು ಅಗತ್ಯ ಕ್ರಮ ಕೈಗೊಂಡು ಪುನರಾರಂಭಿಸಬೇಕು ಎಂದು ಒತ್ತಾಯಿಸಿವೆ.
ಕಾರ್ಖಾನೆ ಮಾರಾಟ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸದಿದ್ದರೆ ರೈತರು ಹಾಗೂ ಕಾರ್ಮಿಕರನ್ನು ಸಂಘಟಿಸಿಕೊಂಡು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.
ಈ ಸಂದರ್ಭದಲ್ಲಿ ಶಿವರಾಯ್ ಮುದಾಳೆ, ಶಿವರಾಜ್ ಪಾಟೀಲ್ ಅತಿವಾಳ, ಕೊಂಡಿಬಾರಾವ್ ಪಾಂಡ್ರೆ, ಬಾಬುರಾವ್ ಹೊನ್ನಾ, ನಜೀರ್ ಅಹ್ಮದ್, ಸಿದ್ದರಾಮ್, ಮಹ್ಮದ್ ನಬೀಸಾಬ್, ಧೂಳಪ್ಪ ಸೋರಳ್ಳಿ, ಮಹ್ಮದ್ ಮುನಿರೋದ್ದೀನ್, ಸಿದ್ರಾಮಪ್ಪ, ಬಸವರಾಜ್ ಅಷ್ಟೂರ್, ವೀರಶೆಟ್ಟಿ ವಟಂಬೆ, ಕಮಳಾಬಾಯಿ, ಶಾಂತಾಬಾಯಿ, ಸಾವಿತ್ರಾ, ವಿಮಲಾಬಾಯಿ ಹಾಗೂ ನರಸಪ್ಪ ಸೇರಿದಂತೆ ರೈತ ಮುಖಂಡರು ಮತ್ತು ಬಿಎಸ್‌ಎಸ್‌ಕೆ ನಿವೃತ್ತ ನೌಕರರು ಉಪಸ್ಥಿತರಿದ್ದರು.