Bidar | ಡಾ.ಕೆ.ಎಸ್.ಬಂಧುಗೆ ಡಾ.ಬಸವಲಿಂಗ ಪಟ್ಟದೇವರು ಸಾಹಿತ್ಯ ಪ್ರಶಸ್ತಿ
ಬೀದರ್: ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಠಾನದ ವತಿಯಿಂದ ಡಾ.ಕೆ.ಎಸ್. ಬಂಧು ಅವರಿಗೆ ಪ್ರಸಕ್ತ ಸಾಲಿನ ಡಾ.ಬಸವಲಿಂಗ ಪಟ್ಟದೇವರು ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಸೋಮವಾರ ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೀದರ್ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಎಸ್. ಬಿರಾದಾರ್ ಅವರು ಡಾ.ಕೆ.ಎಸ್. ಬಂಧು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ವಿಶ್ವಗುರು ಬಸವಣ್ಣನವರು ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು. ಎಲ್ಲರನ್ನು ತಮ್ಮ ಹೃದಯದಲ್ಲಿ ಇಂಬಿಟ್ಟುಕೊಂಡು ಜಾತಿ-ಭೇದವಿಲ್ಲದೆ ಎಲ್ಲ ಜನಾಂಗದವರನ್ನು ಪ್ರೀತಿಸಿದರು. ಡಾ.ಕೆ.ಎಸ್. ಬಂಧು ಅವರು ಬಸವಣ್ಣನವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಪಾಲಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಡಾ.ಕೆ.ಎಸ್. ಬಂಧು ಅವರು ನಡೆ-ನುಡಿ ಒಂದಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ‘ಸದ್ವಿನಯವೇ ಸದಾಶಿವನ ಒಲುಮೆ’ ಎಂಬ ಗುರು ಬಸವಣ್ಣನವರ ವಚನದಂತೆ ಅವರ ಜೀವನ ಸಾಗುತ್ತಿದೆ. ಅವರಲ್ಲಿ ತಾಯಿ ಹೃದಯವಿದ್ದು, ಶರಣ ಧರ್ಮದ ಪ್ರಮುಖ ಗುಣವಾದ ತನ್ನನ್ನು ತಾನು ತಗ್ಗಿಸಿಕೊಳ್ಳುವ ಸ್ವಭಾವವನ್ನು ಹೊಂದಿದ್ದಾರೆ. ಎದುರಿನ ಪ್ರತಿಯೊಬ್ಬ ವ್ಯಕ್ತಿಯನ್ನೂ ಶಿವನ ಸ್ವರೂಪವೆಂದು ಕಂಡು ಗೌರವಿಸುವ ಸದ್ವಿನಯವನ್ನು ಅವರು ಪಾಲಿಸುತ್ತಿದ್ದಾರೆ. ಇಂತಹ ವ್ಯಕ್ತಿಗೆ ಪ್ರಶಸ್ತಿ ದೊರೆತಿರುವುದು ಸಂತೋಷದ ಸಂಗತಿ ಎಂದರು.
ಗುರುಬಸವ ಪಟ್ಟದೇವರು ಮಾತನಾಡಿ, ಬುದ್ಧನ ಅಷ್ಟಾಂಗ ಮಾರ್ಗ, ಬಸವಣ್ಣನವರ ಕಾಯಕ ತತ್ವ ಹಾಗೂ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ತತ್ವಾದರ್ಶಗಳನ್ನು ಡಾ.ಕೆ.ಎಸ್. ಬಂಧು ಅವರ ಜೀವನದಲ್ಲಿ ಕಾಣಬಹುದು. ನುಡಿದಂತೆ ನಡೆಯುವ ಅವರ ಸೇವೆಯನ್ನು ಗುರುತಿಸಿ ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಠಾನದಿಂದ ಡಾ.ಬಸವಲಿಂಗ ಪಟ್ಟದೇವರು ಸಾಹಿತ್ಯ ಪ್ರಶಸ್ತಿ ನೀಡಿರುವುದು ಸಂತಸದ ವಿಷಯ ಎಂದು ಹೇಳಿದರು.
ಡಾ.ಮಕ್ತುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಬಂಡೆಪ್ಪ ಶರಣ ವಹಿಸಿದ್ದರು.
ಈ ಸಂದರ್ಭದಲ್ಲಿ ಶಿಗ್ಗಾವಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಟಿ.ಎಂ.ಭಾಸ್ಕರ್, ಜೈರಾಜ್ ಖಂಡ್ರೆ, ಬಸವರಾಜ್ ನಂದಿ, ಡಾ.ಗವಿಸಿದ್ಧಪ್ಪ ಪಾಟೀಲ್, ಸ್ವರೂಪಾ ಬಳತೆ ಹಾಗೂ ದೀಕ್ಷಾ ಸೇರಿದಂತೆ ಇತರರು ಇದ್ದರು. ದೀಪಕ್ ಠಮಕೆ ನಿರೂಪಿಸಿದರು.