Bidar | ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಿ : ಮಹೇಶ್ ಗೋರನಾಳಕರ್
ಬೀದರ್: ಬೌದ್ಧ ಅಭಿವೃದ್ಧಿ ನಿಗಮವನ್ನು ತಕ್ಷಣ ಸ್ಥಾಪಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ರಾಜ್ಯ ಸಂಯೋಜಕ ಮಹೇಶ್ ಗೋರನಾಳಕರ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶೇ.24ರಷ್ಟು ಅನುದಾನವನ್ನು ಮೀಸಲಿಟ್ಟು, ಅದನ್ನು ಬೇರೆ ಕಾರ್ಯಗಳಿಗೆ ಬಳಸದೇ ಸಮುದಾಯಗಳ ಅಭಿವೃದ್ಧಿಗಾಗಿಯೇ ಬಳಸಬೇಕು ಎಂದು ಹೇಳಿದರು.
ರಾಜ್ಯದ ಪ್ರತಿ ಹಳ್ಳಿಯಲ್ಲಿ ದಲಿತರಿಗೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು. ಪ್ರತಿ ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸುಸಜ್ಜಿತ ಡಾ. ಅಂಬೇಡ್ಕರ್ ಭವನಗಳನ್ನು ನಿರ್ಮಿಸಬೇಕು. ಫಾರ್ಮ್ ನಂ. 50, 53 ಮತ್ತು 57ರಡಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ಅನ್ಯಾಯ ಮಾಡುತ್ತಿರುವುದನ್ನು ನಿಲ್ಲಿಸಿ, ಎಲ್ಲಾ ಅರ್ಹ ರೈತರಿಗೆ ಸಿ-ಫಾರ್ಮ್ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಬೀದರ್‌ನಲ್ಲಿ ಸ್ಲಂ ಬೋರ್ಡ್ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 750 ಮನೆಗಳ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಸಂಬಂಧಿತ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುವ ಎಲ್ಲಾ ವರ್ಗದವರಿಗೆ ನಿವೇಶನ ಮತ್ತು ಮನೆ ಮಂಜೂರು ಮಾಡಬೇಕು. ಆಶಾ ಕಾರ್ಯಕರ್ತೆಯರನ್ನು ಖಾಯಂ ನೌಕರರಾಗಿ ಪರಿಗಣಿಸಿ 18 ಸಾವಿರ ರೂ. ವೇತನ ನಿಗದಿ ಮಾಡಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ತಡೆಯಬೇಕು. ಕಲ್ಯಾಣ ಕರ್ನಾಟಕದಲ್ಲಿ ನಿರುದ್ಯೋಗ ನಿವಾರಣೆಗೆ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಹೇಳಿದರು.
ಅಂತರ್ಜಾತಿ, ಒಳಪಂಗಡ ಮತ್ತು ಸರಳ ಸಾಮೂಹಿಕ ವಿವಾಹಗಳಿಗೆ ನೀಡುವ ಪ್ರೋತ್ಸಾಹ ಧನವನ್ನು ತಕ್ಷಣ ಮಂಜೂರು ಮಾಡಿ ಅದರ ಮೊತ್ತವನ್ನು ಹೆಚ್ಚಿಸಬೇಕು. ಉದ್ಯೋಗಿನಿ ಸ್ವಯಂ ಉದ್ಯೋಗ ಸಾಲದ ಪ್ರೋತ್ಸಾಹಧನ ಹೆಚ್ಚಳ ಮಾಡಬೇಕು. ಅಸ್ಪೃಶ್ಯತೆ ನಿವಾರಣೆಗೆ ಕಾರ್ಯಯೋಜನೆ ರೂಪಿಸಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಓಣಿಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು
ಈ ಸಂದರ್ಭದಲ್ಲಿ ಆರ್ ಪಿ ಐ (ಅಂಬೇಡ್ಕರ್) ಪಕ್ಷದ ಜಿಲ್ಲಾಧ್ಯಕ್ಷ ಪ್ರಕಾಶ್ ರಾವಣ, ರಾಜ್ಯ ಸಮಿತಿ ಸದಸ್ಯ ಗಂಗಮ್ಮಾ ಫುಲೆ, ಕಲಬುರಗಿ ವಿಭಾಗೀಯ ಮಹಿಳಾ ಕಾರ್ಯಾಧ್ಯಕ್ಷೆ ಉಷಾಬಾಯಿ ಬನ್ಸುಡೆ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಶೆಶಿಕಲಾ ಶರ್ಮಾ, ಬೀದರ ಮಹಿಳಾ ತಾಲೂಕು ಅಧ್ಯಕ್ಷೆ ಸೊನಮ್ಮಾ ಕಸ್ತೂರೆ ಇದ್ದರು.