ಬೀದರ್ | ಅಮೆರಿಕದ ಸಾಮ್ರಾಜ್ಯಶಾಹಿ ನೀತಿ ಖಂಡಿಸಿ ಸಿಪಿಐ ಪ್ರತಿಭಟನೆ
ವೆನೆಜುವೆಲಾ ಅಧ್ಯಕ್ಷರ ಬಿಡುಗಡೆಗೆ ಆಗ್ರಹ
ಬೀದರ್ : ಅಮೆರಿಕಾದ ಸಾಮ್ರಾಜ್ಯಶಾಹಿ ನೀತಿಯನ್ನು ಖಂಡಿಸಿ ಹಾಗೂ ವೆನೆಜುವೆಲಾ ಅಧ್ಯಕ್ಷರ ಬಿಡುಗಡೆಗೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ತಹಶೀಲ್ದಾರ್ ಕಚೇರಿ ಎದುರು ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅಮೆರಿಕಾದ ವಿರುದ್ಧ ಘೋಷಣೆಗಳನ್ನು ಕೂಗಿ, ವೆನೆಜುವೆಲಾ ಅಧ್ಯಕ್ಷರ ತಕ್ಷಣದ ಬಿಡುಗಡೆಗೆ ಆಗ್ರಹಿಸಲಾಯಿತು.
ನಂತರ ತಹಶೀಲ್ದಾರ್ ಅವರ ಮೂಲಕ ಪ್ರಧಾನಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ವೆನೆಜುವೆಲಾ ದೇಶದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುವ ಉದ್ದೇಶದಿಂದ ಜ.3ರಂದು ಅಮೆರಿಕ ವೈಮಾನಿಕ ದಾಳಿ ನಡೆಸಿ, ಆ ದೇಶದ ಅಧ್ಯಕ್ಷ ನಿಕೊಲಸ್ ಮಡೂರೊ ಹಾಗೂ ಅವರ ಪತ್ನಿಯನ್ನು ಬಂಧಿಸಿ ಅಮೆರಿಕಾಕ್ಕೆ ಕರೆದೊಯ್ದಿರುವುದು ಅಂತಾರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ.
ಅಮೆರಿಕವು ವಿವಿಧ ರಾಷ್ಟ್ರಗಳಲ್ಲಿ ಚುನಾಯಿತ ಸರ್ಕಾರಗಳನ್ನು ಪತನಗೊಳಿಸಿ ತನ್ನ ಪರವಾದ ಬಲಪಂಥೀಯ ಆಡಳಿತಗಳನ್ನು ಸ್ಥಾಪಿಸುವ ನೀತಿಯನ್ನು ಅನುಸರಿಸುತ್ತಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಬಂಧನಕ್ಕೊಳಗಾದವರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಜೊತೆಗೆ ಅಮೆರಿಕಾದ ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ಧ ಭಾರತ ಸರ್ಕಾರ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯ ಬಾಬುರಾವ್ ಹೊನ್ನಾ, ಜಿಲ್ಲಾ ಕಾರ್ಯದರ್ಶಿ ನಝೀರ್ ಅಹ್ಮದ್, ಸಹ ಕಾರ್ಯದರ್ಶಿ ಶಫಾಯತ್ ಅಲಿ, ಖಜಾಂಚಿ ಜೈಶೀಲಕುಮಾರ್, ಪ್ರಭು ಹುಚಕನಳ್ಳಿ, ಶೀಲಾ ಸಾಗರ್, ಮೋಹಿದಮಿಯ್ಯಾ, ಮುಹಮ್ಮದ್ ಖಮರ್ ಪಟೇಲ್, ವೀರಶೆಟ್ಟಿ ವಟಂಬೆ, ಖದೀರಮಿಯ್ಯಾ ಸೇರಿದಂತೆ ಅನೇಕ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.