×
Ad

ಬೀದರ್: ದಲಿತರ ಮೇಲಿನ ಹಿಂಸಾಚಾರ, ಅಂಬೇಡ್ಕರ್, ನ್ಯಾಯಾಂಗಕ್ಕೆ ಅವಮಾನ ಖಂಡಿಸಿ ಪ್ರತಿಭಟನೆ

Update: 2025-10-18 18:35 IST

ಬೀದರ್: ಇತ್ತೀಚಿಗೆ ದಲಿತರ ಮೇಲಿನ ಹಿಂಸಾಚಾರ, ಅಂಬೇಡ್ಕರ್ ಮತ್ತು ನ್ಯಾಯಾಂಗಕ್ಕೆ ಮಾಡಿರುವ ಅವಮಾನವನ್ನು ಖಂಡಿಸಿ ಇಂದು ವಿವಿಧ ದಲಿತ ಸಂಘಟನೆಗಳ ಯುವ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆಯು ನಗರದ ಪ್ರವಾಸಿ ಮಂದಿರದಿಂದ ಭಗತಸಿಂಗ್ ವೃತ್ತ, ಶಿವಾಜಿ ವೃತ್ತದ ಮೂಲಕ ಅಂಬೇಡ್ಕರ್ ವೃತ್ತ ತಲುಪಿತು. ಪ್ರತಿಭಟನೆಯಲ್ಲಿ ಆರೆಸ್ಸೆಸ್, ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆದಿರುವ ವಕೀಲ ಹಾಗೂ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ವಕೀಲ ಅನಿಲ್ ಮಿಶ್ರಾ ಅವರ ವಿರುದ್ಧ ಘೋಷಣೆಗಳು ಕೂಗಲಾಯಿತು. ಕೊನೆಯಲ್ಲಿ ಅಂಬೇಡ್ಕರ್ ವೃತ್ತದಲ್ಲಿ ವಕೀಲ ಅನಿಲ್ ಮಿಶ್ರಾ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯಲ್ಲಿ ರಾಜಕುಮಾರ್ ಮೂಲಭಾರತಿ ಅವರು ಮಾತನಾಡಿ, ಸಿಜೆಐ ಅವರ ಮೇಲೆ ಶೂ ಎಸೆಯೋದು ಅಥವಾ ಗ್ವಾಲಿಯರ್ ನಲ್ಲಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಘಟನೆಗಳು ಮುಸ್ಲಿಂರು ಮಾಡಿದ್ದರೆ ಅವರ ಪರಿಸ್ಥಿತಿ ನೆಟ್ಟಗಿರುತ್ತಿರಲಿಲ್ಲ. ಈ ಘಟನೆಗಳ ವಿರುದ್ಧ ಯಾವೊಬ್ಬ ಬಿಜೆಪಿಯವರು ಧ್ವನಿ ಎತ್ತುತಿಲ್ಲ. ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ವಿರುದ್ಧ ಮಾತಾಡಿದರೆ ಎಲ್ಲ ಬಿಜೆಪಿಗರು ಮಾತಾಡುವುದಕ್ಕೆ ಹೊರಗಡೆ ಬರು‌ತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಅವರಿಗೆ ಮಾನ, ಮರ್ಯಾದೆ ಇಲ್ಲ. ಅವರು ಸಂವಿಧಾನವನ್ನು ಒಪ್ಪುವುದಿಲ್ಲ. ಯಾಕೆಂದರೆ ಸ್ವತಃ ಅವರ ನಾಯಕರೇ ಸಂವಿಧಾನ ಬದಲಾವಣೆ ಮಾಡುವ ಮಾತುಗಳನ್ನಾಡಿದರು. ಇಂತಹ ವ್ಯವಸ್ಥೆಯಲ್ಲಿ ನಾವು ಜಾಗೃತರಾಗುವ ಅವಶ್ಯಕತೆ ಇದೆ ಎಂದರು.

ವಿವಿಧ ದಲಿತ ಸಂಘಟನೆಗಳ ಯುವ ಹೋರಾಟ ಸಮಿತಿಯ ಅಧ್ಯಕ್ಷ ಪ್ರಕಾಶ್ ರಾವಣ ಅವರು ಮಾತನಾಡಿ, ವಿವಿಧ ದೇಶದಲ್ಲಿ ನಾಲೆಜ್ ಡೇ ಎಂದು ಅಂಬೇಡ್ಕರ್ ಅವರ ಜನುಮ ದಿನವನ್ನು ಆಚರಿಸಲಾಗುತ್ತಿದೆ. ಆದರೆ ನಮ್ಮ ದೇಶದಲ್ಲಿ ಗುಲಾಮಿ, ಸೆಗಣಿ ತಿನ್ನುವ ಮನುವಾದಿಗಳು ಅಂಬೇಡ್ಕರ್ ಅವರನ್ನು ನಿರಂತರವಾಗಿ ಅವಮಾನ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದರು.

ಅನಿಲ್ ಮಿಶ್ರಾ ಎನ್ನುವ ವಕೀಲ ಅಂಬೇಡ್ಕರ್ ಅವರನ್ನು ಅವಮಾನ ಮಾಡಿ, ನಂತರ ನನಗೆ ಮಾತಾಡುವ ಅಧಿಕಾರ ಇದೆ ಎಂದು ಹೇಳುತ್ತಾನೆ. ಆದರೆ ಆತನಿಗೆ ಮಾಡಾಡುವ ಅಧಿಕಾರ ನೀಡಿದ್ದು ಅಂಬೇಡ್ಕರ್ ಅವರ ಸಂವಿಧಾನವಾಗಿದೆ ಎಂದು ಅವರು ಹೇಳಿದರು.

ಇತ್ತೀಚಿನ ದಲಿತ ಹಿಂಸಾಚಾರ ಪ್ರಕರಣಗಳನ್ನು ಎಸ್ ಐ ಟಿ ಮೂಲಕ ತನಿಖೆ ನಡೆಸಬೇಕು. ವಕೀಲ ಅನಿಲ್ ಮಿಶ್ರಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಕೀಲ ರಾಕೇಶ್ ಕಿಶೋರ್ ವಿರುದ್ಧ ನ್ಯಾಯಾಂಗ ಭದ್ರತೆ ಉಲ್ಲಂಘನೆ ಪ್ರಕರಣ ದಾಖಲಿಸಿ ಶಿಕ್ಷೆ ನೀಡಬೇಕು. ಅಂಬೇಡ್ಕರ್ ಪ್ರತಿಮೆ ಹಾಗೂ ದಲಿತ ಐಕಾನ್ ಗಳ ಗೌರವ ರಕ್ಷಣೆಗೆ ಶಾಶ್ವತ ಕಾನೂನು ರೂಪಿಸಬೇಕು. ಪೊಲೀಸ್ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಜಾತಿಬೇಧ ವಿರೋಧಿ ತರಬೇತಿ ಮತ್ತು ನಿಗಾ ವ್ಯವಸ್ಥೆ ಇರಬೇಕು. ಹಾಗೆಯೇ ಶಾಲಾ, ಕಾಲೇಜು ಪಠ್ಯಗಳಲ್ಲಿ ಸಂವಿಧಾನ ಮತ್ತು ಅವರ ಬಗ್ಗೆ ಪಾಠ ಕಡ್ಡಾಯಗೊಳಿಸಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ವಿವಿಧ ದಲಿತ ಸಂಘಟನೆಗಳ ಯುವ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಗೌತಮ್ ಬಗದಲಕರ್, ಪ್ರಧಾನ ಕಾರ್ಯದರ್ಶಿ ಹರ್ಷಿತ್ ದಾಂಡೇಕರ್, ವಿನೋದ್ ರತ್ನಾಕರ್, ವಿನೀತ್ ಗಿರಿ, ಸಾಯಿ ಶಿಂದೆ, ಲೊಕೇಶ ಕಾಂಬ್ಳೆ ಹಾಗೂ ಗೌತಮ್ ಡಾಕುಳಗಿ ಸೇರಿದಂತೆ ಮಹಿಳೆಯರು ಮತ್ತು ಇನ್ನು ಅನೇಕರು ಭಾಗವಹಿಸಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News