×
Ad

ಬೀದರ್ | ಸುಳ್ಳು ಸುದ್ದಿಗಳು ಸಮಾಜಕ್ಕೆ ಕಂಟಕವಾಗಿರುತ್ತದೆ : ಸಚಿವ ಈಶ್ವರ್ ಖಂಡ್ರೆ

Update: 2025-08-06 21:12 IST

ಬೀದರ್ : ಸುಳ್ಳು ಸುದ್ದಿಗಳು ಸಮಾಜಕ್ಕೆ ಕಂಟಕವಾಗಿರುತ್ತದೆ ಎಂದು ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ  ಹೇಳಿದರು.

ನಗರದ ಮೈಲೂರು ರಸ್ತೆಯಲ್ಲಿರುವ ಜಿ.ಎನ್.ಡಿ ಕಾಲೇಜು ಕ್ಯಾಂಪಸ್‌ನ ಗುರುನಾನಕ ಭವನ ಅವರಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಹಯೋಗದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪತ್ರಕರ್ತರಿಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವುದರ ಜೊತೆಗೆ ಈ ಅಂಗಗಳ ನ್ಯೂನ್ಯತೆಯನ್ನು ಎತ್ತಿ ಹಿಡಿಯುವ, ಪ್ರಗತಿದಾಯಕ ಕಾರ್ಯ ಮಾಡಿದರೆ ಅವನ್ನು ಪ್ರಶಂಸಿಸುವ ಕಾರ್ಯ ಮಾಧ್ಯಮಗಳು ಮಾಡುತ್ತವೆ. ಲೇಖನಿ ಖಡ್ಗಕ್ಕಿಂತ ಹರಿತವಾದದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸುದ್ದಿಯಲ್ಲಿ ನಿಖರತೆ ಇರುವುದು ಮುಖ್ಯವಾಗಿದೆ ಎಂದು ಹೇಳಿದರು.

ಸುಳ್ಳು ಸುದ್ದಿಗಳು ಸಮಾಜಕ್ಕೆ ಕಂಟಕವಾಗಿರುತ್ತದೆ. ಇತ್ತೀಚಿಗೆ ಎಲ್ಲಾ ಕ್ಷೇತ್ರಗಳು ಕಲುಷಿತಗೊಂಡಿದೆ. ಅದೇ ರೀತಿ ಮಾಧ್ಯಮ ಕ್ಷೇತ್ರ ಕೂಡ ಹಾದಿ ತಪ್ಪುತ್ತಿರುವುದು ನಾವು ನೋಡುತ್ತಿದ್ದೇವೆ. ಮಹಿಳೆ ಮತ್ತು ಮಕ್ಕಳ ಮೇಲೆ ಅತ್ಯಾಚಾರ ದೌರ್ಜನ್ಯ, ಗುಂಪು ಹತ್ಯೆದಂತಹ ಘಟನೆಗಳ ಬಗ್ಗೆ ನಿಷ್ಪಕ್ಷಪಾತವಾಗಿ, ನಿಖರತೆಯಿಂದ ಸುದ್ದಿ ಮಾಡುವ ಮಾಧ್ಯಮದವರಿಗೆ ಧನ್ಯವಾದಗಳು ಎಂದು ತಿಳಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಪತ್ರಕರ್ತರು ನಿಜವಾದ ಸುದ್ದಿಗಳನ್ನು ನೀಡುತ್ತಾರೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಿರುತ್ತಾರೆ. ಗ್ರಾಮೀಣ ಪತ್ರಕರ್ತರಿಗೆ ಇನ್ನು ಸ್ವಲ್ಪ ಬಲ ಕೊಡಬೇಕಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಯಾವ ಸಿದ್ಧಾಂತಗಳ ಮೇಲೆ ಮಾಧ್ಯಮ ನಡೆಯಬೇಕು ಎನ್ನುವುದು ನಾವು ತಿಳಿದುಕೊಳ್ಳಬೇಕಾಗಿದೆ. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ಅದರ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಸುದ್ದಿಗಳು ನಿಷ್ಪಕ್ಷಪಾತವಾಗಿರಬೇಕು. ಹಾಗೆಯೇ ಒಂದು ಪತ್ರಿಕೆಯಲ್ಲಿ ಸ್ಥಳೀಯ ಸುದ್ದಿಗಳಿಂದ ರಾಷ್ಟ್ರ, ಅಂತಾರಾಷ್ಟ್ರೀಯ, ವೈಜ್ಞಾನಿಕ ಹಾಗೂ ಇನ್ನು ಹಲವಾರು ಸುದ್ದಿಗಳು ಒಳಗೊಂಡಿರಬೇಕು. ಆವಾಗ ಮಾತ್ರ ಓದುಗರಿಗೆ ಎಲ್ಲ ವಿಷಯಗಳ ಬಗ್ಗೆ ಅರಿವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಗುರುದ್ವಾರದ ಪ್ರಬಂಧಕ ಸಮಿತಿ ಅಧ್ಯಕ್ಷ ಡಾ.ಸರ್ದಾರ್ ಬಲಬೀರ್ ಸಿಂಗ್, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ, ಸದಸ್ಯರಾದ ರಶ್ಮಿ, ಅಬ್ಬಾಸ್ ಮುಲ್ಲಾ, ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಹಾಗೂ ಬೀದರ ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸುಳ್ಳೊಳ್ಳಿ ಸೇರಿದಂತೆ ಕಲ್ಯಾಣ ಕರ್ನಾಟಕದ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಸುಮಾರು 200ಕ್ಕೂ ಅಧಿಕ ಪತ್ರಕರ್ತರು ತರಬೇತಿಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News