×
Ad

ಬೀದರ್ | ಕಾರಂಜಾ ಸಂತ್ರಸ್ತರಿಗೆ ಪರಿಹಾರ ನೀಡಲು ತಾಂತ್ರಿಕ ಸಮಿತಿ ರಚಿಸಿದ್ದು ಸಂತಸ ತಂದಿದೆ : ಡಾ.ಲಕ್ಷ್ಮಣ ದಸ್ತಿ

Update: 2025-05-05 22:04 IST

ಬೀದರ್ : ಕಾರಂಜಾ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕಾಗಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದು ಸಂತಸ ತಂದಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ್ ದಸ್ತಿ ಅವರು ಹೇಳಿದರು.

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಂಜಾ ಸಂತ್ರಸ್ತರಿಗೆ ವೈಜ್ಞಾನಿಕ ಮಾನದಂಡದಂತೆ ಮಾನವೀಯತೆಯ ಆಧಾರದ ಮೇಲೆ ಪರಿಹಾರ ಹಣ ನೀಡಬೇಕು ಎಂದು ಸುಮಾರು 920 ದಿನಗಳ ಕಾಲ ನಿರಂತರವಾಗಿ ಹೋರಾಟ ನಡೆಸಲಾಗಿತ್ತು. ಸಚಿವ ಈಶ್ವರ್ ಖಂಡ್ರೆ ಮತ್ತು ಜಿಲ್ಲೆಯ ಎಲ್ಲ ಶಾಸಕರ ಮುತುವರ್ಜಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ  ಸಭೆ ಮಾಡಲಾಗಿತ್ತು. ಆ ಸಭೆಯಲ್ಲಿ ಘೋಷಣೆ ಮಾಡಿರುವಂತೆ ಇವಾಗ ಸಂತ್ರಸ್ತರ ಬೇಡಿಕೆ ಈಡೇರಿಸಲು ಸಮಿತಿ ರಚನೆ ಮಾಡಲಾಗಿದೆ. ಇದರಿಂದಾಗಿ ನಮಗೆ ಸಂಪೂರ್ಣವಾಗಿ ಪರಿಹಾರ ಸಿಗುವ ಖುಷಿ ಇದೆ ಎಂದರು.

ಪ್ರಾದೇಶಿಕ ಆಯುಕ್ತ ಕೃಷ್ಣಾ ಭಾಜಪೇಯಿ ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸದಸ್ಯರುಗಳಾಗಿ ಬಾಗಲಕೋಟೆಯ ಭೂಸ್ವಾಧೀನ ಪುನರ್ವಸತಿ ಪುನರ್ ನಿರ್ಮಾಣದ ಆಯುಕ್ತ, ಕಲಬುರಗಿ ವಲಯದ ನೀರಾವರಿ ಯೋಜನೆಯ ಮುಖ್ಯ ಇಂಜಿನಿಯರ್, ಬೀದರ್ ಜಿಲ್ಲಾಧಿಕಾರಿ, ಕಾರಂಜಾ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿಗಳಾಗಿ ಮುಖ್ಯ ಆಡಳಿತಾಧಿಕಾರಿಗಳು ಸಮಿತಿಯಲ್ಲಿ ಇರಲಿದ್ದಾರೆ. ಆದರೆ ಸಮಿತಿಯಲ್ಲಿ ಆದಷ್ಟು ಬೇಗ ಇಬ್ಬರು ಪ್ರತಿನಿಧಿಗಳನ್ನು ಸೇರಿಸಿಕೊಳ್ಳಬೇಕು ಎಂದರು.

ಚಿಂತಕ ಪ್ರೊ.ಆರ್.ಕೆ.ಹುಡಗಿ ಮಾತನಾಡಿ, ಎಷ್ಟೋ ಸಮಿತಿಗಳು ತಾವು ನಿಗದಿಪಡಿಸಿದ ಕಾಲ ಮಿತಿಯೊಳಗೆ ವರದಿ ಸಲ್ಲಿಸಲಿಲ್ಲ. ಇದರಿಂದಾಗಿ ಕಾರಂಜಾ ಸಂತ್ರಸ್ತರ ಈ ವರದಿ ನಿಗದಿತ ಕಾಲಮಿತಿಯೊಳಗೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಬಸವರಾಜ್ ದೇಶಮುಖ, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಹುಚಕನಳ್ಳಿ, ಕ. ಸಾ. ಪ ಅಧ್ಯಕ್ಷ ಸುರೇಶ್ ಚನಶೆಟ್ಟಿ, ಚಿಂತಕ ಹಾಗೂ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಮುಖಂಡ ವಿನಯ್ ಮಾಳಗೆ, ರಾಜಪ್ಪಾ ಕಮಲಪೂರ್, ರಾಜಶೇಖರ್ ಕೋಸಂ, ಹಾಗೂ ರೋಹನಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News