ಬೀದರ್| ಕಸಾಪ ವತಿಯಿಂದ ಡಾ. ಭೀಮಣ್ಣ ಖಂಡ್ರೆ ಅವರ ನುಡಿ ನಮನ ಕಾರ್ಯಕ್ರಮ
ಭಾಲ್ಕಿ: ಬೀದರ್ ಜಿಲ್ಲೆಯು ಕರ್ನಾಟಕದಲ್ಲಿ ಉಳಿಯುವುವಲ್ಲಿ ಡಾ. ಭೀಮಣ್ಣ ಖಂಡ್ರೆಯವರ ಕೊಡುಗೆ ಅಪಾರವಾಗಿದೆ ಎಂದು ಹಿರಿಯ ಸಾಹಿತಿ ಡಾ. ಸೋಮನಾಥ್ ನುಚ್ಚಾ ಅವರು ಅಭಿಪ್ರಾಯಪಟ್ಟರು.
ಭಾಲ್ಕಿಯ ಸದ್ಗುರು ವಿದ್ಯಾಲಯದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮಂಗಳವಾರ ನಡೆದ ಡಾ. ಭೀಮಣ್ಣ ಖಂಡ್ರೆಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಸೋಮನಾಥ್ ನುಚ್ಚಾ, ಭಾಲ್ಕಿ ಹಿರೇಮಠದ ಹಿರಿಯ ಸ್ವಾಮೀಜಿ ಲಿಂ.ಡಾ. ಚನ್ನಸಬವ ಪಟ್ಟದೇವರು ಹಾಗೂ ಡಾ. ಭೀಮಣ್ಣ ಖಂಡ್ರೆ ಅವರು ಒಂದೇ ನಾಣ್ಯದ ಎರಡು ಮುಖಗಳಾಗಿದ್ದರು ಎಂದರು.
ಚನ್ನಬಸವ ಪಟ್ಟದೇವರು ಇಚ್ಛಾಶಕ್ತಿಯಾದರೆ, ಭೀಮಣ್ಣ ಖಂಡ್ರೆಯವರು ಕ್ರಿಯಾಶಕ್ತಿಯಾಗಿದ್ದರು. ಭೀಮಣ್ಣ ಖಂಡ್ರೆಯವರ ಸಾಧನೆ ಮರೆಯಲಾಗದು. ಅವರು ಹೋರಾಟ ಮಾಡದಿದ್ದರೆ, ಈ ಭಾಗ ಕರ್ನಾಟಕದಲ್ಲಿ ಇರುತ್ತಿರಲಿಲ್ಲ. ಕರ್ನಾಟಕದ ಕಿರೀಟ ಮುಂಡಿ ಕಳಚಿಕೊಳ್ಳುತ್ತಿತ್ತು. ಕರ್ನಾಟಕ ಏಕೀಕರಣ್ಣಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ ಅವರಾಗಿದ್ದರು ಎಂದು ಹೇಳಿದರು.
ಕಸಾಪ ತಾಲೂಕಾಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿ, ಭೀಮಣ್ಣ ಖಂಡ್ರೆ ಅವರದ್ದು ನಿಶ್ವಾರ್ಥ ಸೇವೆಯಾಗಿತ್ತು. ಅನ್ಯಾಯದ ವಿರುದ್ಧ ಹೋರಾಡಿ ಎಲ್ಲರಿಗೂ ನ್ಯಾಯ ಒದಗಿಸಿಕೊಡುವ ವ್ಯಕ್ತಿತ್ವ ಅವರದ್ದಾಗಿತ್ತು. ಈ ಭಾಗದಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ, ಚರಂಡಿ, ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವಕೊಡುವಲ್ಲಿ ಅವರ ಕಾರ್ಯ ಮಹತ್ವದ್ದಾಗಿದೆ ಎಂದರು.
ಹಿರಿಯ ಪತ್ರಕರ್ತ ವಿಜಯ್ ಕುಮಾರ್ ಪರ್ಮಾ, ಕಸಾಪ ನಗರ ಘಟಕದ ಅಧ್ಯಕ್ಷ ಸಂತೋಷ್ ಬಿ.ಜಿ ಪಾಟೀಲ್ ಅವರು ಭೀಮಣ್ಣ ಖಂಡ್ರೆಯವರ ಒಡನಾಟದ ಬಗ್ಗೆ ಮಾತನಾಡಿದರು. ಸದ್ಗುರು ವಿದ್ಯಾಲಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಕ್ಷಯಕುಮಾರ್ ಮುದ್ದಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ವೀರಶೈವ ಮಹಾಸಭಾದ ಅಧ್ಯಕ್ಷ ಮಲ್ಲಿಕಾರ್ಜುನ್ ಹಲಮಂಡಗೆ, ಕಸಾಪ ಉಪಾಧ್ಯಕ್ಷ ಕಾಶಿನಾಥ್ ಲದ್ದೆ, ಅಶೋಕ್ ಬಾವುಗೆ, ಕಸಾಪ ರಾಜ್ಯ ಪರಿಷತ್ ಸದಸ್ಯೆ ಮಲ್ಲಮ್ಮ ಆರ್ ಪಾಟೀಲ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಶಂಭುಲಿಂಗ್ ಕಾಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಕ್ಷಕಿ ಉಶಾ ನಿಟ್ಟೂರಕರ್ ಸ್ವಾಗತಿಸಿದರು. ಶಿಕ್ಷಕಿ ಸುಸ್ಮಿತಾ ಸಹಾನೆ ನಿರೂಪಿಸಿದರು.