Bidar | ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಹುಮನಾಬಾದ್ ಎಂಎಲ್ಎ, ಎಂಎಲ್‌ಸಿ!
ಬೀದರ್ : ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹುಮನಾಬಾದ್ ನ ಶಾಸಕ ಸಿದ್ದು ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಅವರು ಒಬ್ಬರಿಗೊಬ್ಬರು ನಿಂದಿಸಿಕೊಂಡು ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಆರಂಭದಲ್ಲೇ ಲೇಔಟ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಶಾಸಕ ಸಿದ್ದು ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಅವಾಚ್ಯ ಶಬ್ದಗಳು ಬಳಸಿ ನಿಂದಿಸಿಕೊಂಡು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದರು.
ಮಧ್ಯದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಇತರರು ಬಂದು ಇಬ್ಬರನ್ನು ತಡೆದರು. ಈ ಘಟನೆಯಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಸಭೆ ಮುಂದೂಡಿದರು.
ಸಭೆಯಲ್ಲಿ ಸಚಿವ ರಹೀಂ ಖಾನ್, ಡಿಸಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಬೋಧಲೆ, ಎಸ್ಪಿ ಪ್ರದೀಪ್ ಗುಂಟಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.