×
Ad

ಬೀದರ್ | ಚಾಂಬೋಳ ಗ್ರಾಮದಲ್ಲಿ ಹಿರಿಯ ನಾಗರಿಕರಿಂದ ಹೊಸ ವರ್ಷಾಚರಣೆ, ಪರಿಸರ ಜಾಗೃತಿ ಅಭಿಯಾನ

Update: 2026-01-02 20:10 IST

ಬೀದರ್ : ಹಿರಿಯ ನಾಗರಿಕರು ಪಿಝಾ, ಬರ್ಗರ್, ಜಂಕ್ ಫುಡ್, ಬೇಕರಿ ತಿನಿಸುಗಳಂತಹ ಅನಾರೋಗ್ಯಕರ ಆಹಾರ ಸೇವನೆ ತ್ಯಜಿಸಿ, ಸಾತ್ವಿಕ ಹಾಗೂ ರಾಸಾಯನಿಕ ರಹಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ. ಪ್ರಕಾಶ್ ಕುಲಕರ್ಣಿ ಅವರು ಸಲಹೆ ನೀಡಿದರು.

ಜೈಹಿಂದ್ ಹಿರಿಯ ನಾಗರಿಕರ ಸಂಘದ ವತಿಯಿಂದ ಬೀದರ್ ಸಮೀಪದ ಚಾಂಬೋಳ ಗ್ರಾಮದಲ್ಲಿರುವ ಪ್ರೊ.ಕುಲಕರ್ಣಿ ಅವರ ಫಾರ್ಮ್ ಹೌಸ್‌ನಲ್ಲಿ ಆಯೋಜಿಸಿದ್ದ ನೂತನ ವರ್ಷಾಚರಣೆ ಹಾಗೂ ಪರಿಸರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಾಯು, ಜಲ ಹಾಗೂ ಶಬ್ದ ಮಾಲಿನ್ಯದಿಂದ ದೂರವಿದ್ದು, ಶುದ್ಧ ಗಾಳಿ ಇರುವ ಹೊಲಗಳು, ಉದ್ಯಾನಗಳು ಹಾಗೂ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ್, 22 ಎಕರೆ ಬಂಜರು ಭೂಮಿಯನ್ನು ಸಾವಯವ ಕೃಷಿ ಪದ್ಧತಿಯಲ್ಲಿ ರೂಪಾಂತರಿಸಿ, 2 ಸಾವಿರ ಮಾವಿನ ಗಿಡಗಳು ಸೇರಿದಂತೆ ವಿವಿಧ ಹಣ್ಣು, ತರಕಾರಿ, ಕಬ್ಬು, ತೊಗರಿ ಹಾಗೂ ಬಟಾಣಿ ಬೆಳೆಸಿರುವ ಪ್ರೊ.ಕುಲಕರ್ಣಿ ಅವರ ಪರಿಶ್ರಮವನ್ನು ಶ್ಲಾಘಿಸಿದರು.

ಇತ್ತೀಚೆಗೆ ಅನಾರೋಗ್ಯದಿಂದ ಚೇತರಿಸಿಕೊಂಡ ಸಂಘದ ಅಧ್ಯಕ್ಷ ರಾಮಕೃಷ್ಣ ಮುನಿಗ್ಯಾಲ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪ್ರೊ.ವಿಜಯಕುಮಾರ್ ಸೂರ್ಯಾನ್, ಹಿರಿಯ ಕಲಾವಿದ ರಾಜೇಂದ್ರಸಿಂಗ್ ಪವಾರ್, ಕೋಶಾಧ್ಯಕ್ಷ ಗಂಗಪ್ಪ ಸಾವಳೆ ಸೇರಿದಂತೆ ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News