×
Ad

Bidar | ಸೌಹಾರ್ದದ ಸಂದೇಶಕ್ಕಾಗಿ ಬೀದರ್‌ನಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭ

Update: 2026-07-11 17:14 IST

ಬೀದರ್ : ಕನ್ನಡ ನೆಲ, ಜಲ, ಸಂಸ್ಕೃತಿಯ ಸಂರಕ್ಷಣೆ, ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಸಮಾಜದಲ್ಲಿ ಸೌಹಾರ್ದ, ಬಾಂಧವ್ಯ, ಭ್ರಾತೃತ್ವ ಮತ್ತು ಭಾವೈಕ್ಯದ ಸಂದೇಶ ಸಾರುವ ಉದ್ದೇಶದಿಂದ ಪ್ರೊ. ರೂಪೇಶ್ ಪುತ್ತೂರು ಅವರು ಶನಿವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಪಾದಯಾತ್ರೆಗೆ ಚಾಲನೆ ನೀಡಿದರು.

ಪಾದಯಾತ್ರೆ ಆರಂಭಕ್ಕೂ ಮುನ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕರೂ ಸಂವಿಧಾನದ ಆಶಯಗಳನ್ನು ಅರ್ಥಮಾಡಿಕೊಂಡು ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರತಿಯೊಂದು ಗ್ರಾಮದಲ್ಲೂ 24 ಗಂಟೆಗಳ ಕಾಲ ಸಾರ್ವಜನಿಕರಿಗೆ ಮುಕ್ತವಾಗಿರುವ ಗ್ರಂಥಾಲಯಗಳು ಸ್ಥಾಪನೆಯಾಗಬೇಕು. ನೈಜ ಇತಿಹಾಸದ ಅರಿವಿಲ್ಲದೆ ಸುಳ್ಳು ಇತಿಹಾಸವನ್ನು ಓದುವುದು ಮತ್ತು ಬೋಧಿಸುವುದರಿಂದ ಸಮಾಜದಲ್ಲಿ ದ್ವೇಷ, ಅಸೂಯೆ ಹಾಗೂ ಮೂಢನಂಬಿಕೆಗಳು ಬೆಳೆಯುತ್ತಿವೆ. ಈ ಪರಿಸ್ಥಿತಿಯನ್ನು ಬದಲಿಸಲು ಜ್ಞಾನ ಮತ್ತು ಸಂವಿಧಾನಿಕ ಮೌಲ್ಯಗಳ ಅರಿವು ಅಗತ್ಯವಾಗಿದೆ ಎಂದು ಹೇಳಿದರು.

ಕನ್ನಡ ನೆಲ, ಜಲ, ಸಂಸ್ಕೃತಿಯ ರಕ್ಷಣೆ ಹಾಗೂ ಸಮಾಜದಲ್ಲಿ ಸೌಹಾರ್ದ, ಬಾಂಧವ್ಯ ಮತ್ತು ಭ್ರಾತೃತ್ವದ ವಾತಾವರಣ ನಿರ್ಮಿಸುವ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಸುಮಾರು 30 ದಿನಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಬುದ್ಧ–ಬಸವ–ಅಂಬೇಡ್ಕರ್ ಯುವ ಸಂಘಟನೆಯ ಅಧ್ಯಕ್ಷ ಮಹೇಶ್ ಗೋರನಾಳಕರ್ ಮಾತನಾಡಿ, ಕರಾವಳಿ ಭಾಗದ ಪ್ರೊ. ರೂಪೇಶ್ ಪುತ್ತೂರು ಅವರು ಶರಣರ ನಾಡು ಬೀದರ್‌ನಿಂದ ಒಬ್ಬರೇ ಪಾದಯಾತ್ರೆ ಆರಂಭಿಸಿರುವುದು ಐತಿಹಾಸಿಕ ಸಾಹಸವಾಗಿದೆ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಟೀಂ ಯುವಾ ಸಂಸ್ಥೆಯ ಅಧ್ಯಕ್ಷ ವಿನಯಕುಮಾರ್ ಮಾಳಗೆ ಮಾತನಾಡಿ, ಸಮಾಜದಲ್ಲಿ ಸೌಹಾರ್ದ ಮತ್ತು ಬಾಂಧವ್ಯದ ಜಾಗೃತಿ ಮೂಡಿಸಲು ಇಂತಹ ಜನಜಾಗೃತಿ ಪಾದಯಾತ್ರೆಗಳು ಹೆಚ್ಚಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಲ್ಯಾಣರಾವ್ ಭೋಸ್ಲೆ ಮಾತನಾಡಿ, ಪಾದಯಾತ್ರೆ ಯಶಸ್ವಿಯಾಗಿ ಗುರಿ ತಲುಪಲಿ ಎಂದು ಶುಭ ಹಾರೈಸಿದರು. ಪಾದಯಾತ್ರೆ ಸಾಗುವ ಮಾರ್ಗದಲ್ಲಿರುವ ಸಾರ್ವಜನಿಕರು ಮತ್ತು ಸಂಘಟನೆಗಳು ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ದಲಿತ ಸೇನೆಯ ಜಿಲ್ಲಾಧ್ಯಕ್ಷ ಶ್ರೀಪತರಾವ್ ದಿನೆ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ರಾಜಕುಮಾರ್ ಗಾದಗಿ, ಡಾ. ಬಿ.ಆರ್. ಅಂಬೇಡ್ಕರ್ ಯೂತ್ ಬ್ರಿಗೇಡ್ ಅಧ್ಯಕ್ಷ ಉದಯ್ ನಾಯಕ್, ಜಗದೀಶ್ವರ್ ಬಿರಾದಾರ್, ಯುವ ಮುಖಂಡ ಶ್ರೀಧರ್ ಸೊಮನೋರ್, ಕಾರ್ಮಿಕ ಮುಖಂಡ ತುಕಾರಾಮ್ ನೇಳಗೆ ಹಾಗೂ ಜಾನಪದ ಸಾಂಸ್ಕೃತಿಕ ತಂಡದ ನಾಯಕ ಅರ್ಜುನ್ ಕಾಂಚೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News