ಅಂಬಿಗರ ಚೌಡಯ್ಯನವರ ತತ್ವಾದರ್ಶ ಎಲ್ಲರೂ ಪಾಲಿಸಬೇಕು : ಸಚಿವ ರಹೀಂ ಖಾನ್
ಬೀದರ್ : ದೇಶಕ್ಕೆ ಸಂದೇಶ ಸಾರಿದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ತತ್ವ ಆದರ್ಶವನ್ನು ಎಲ್ಲರೂ ಪಾಲಿಸಬೇಕು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ್ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಚನ್ನಬಸವ ಪಟ್ಟದೇವರ ರಂಗ ಮಂದಿರದಲ್ಲಿ ಆಯೋಜಿಸಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶರಣ ಚಳವಳಿಯಲ್ಲಿ ಪಾಲ್ಗೊಂಡು, ಸಾಮಾಜಿಕ ಪರಿವರ್ತನೆಗಾಗಿ ಬಸವಣ್ಣನವರ ಹೆಗಲಿಗೆ ಹೆಗಲಾಗಿ ನಿಂತವರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಪ್ರಮುಖರಾಗಿದ್ದಾರೆ. ತಮ್ಮ ನೇರ, ನಿಷ್ಠುರ, ತೀಕ್ಷ್ಣ ಬರಹಗಳ ಮೂಲಕ ವರ್ಣ ವ್ಯವಸ್ಥೆ, ಲಿಂಗ ತಾರತಮ್ಯ, ಅಸ್ಪೃಶ್ಯತೆ ಮುಂತಾದ ಸಾಮಾಜಿಕ ಅನಿಷ್ಠಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸಿದರು. ನಿರ್ಮಲ ಭಕ್ತಿ, ನಿಸ್ವಾರ್ಥ ಸೇವೆಯೇ ಭಗವಂತನನ್ನು ಒಳಿಸಿಕೊಳ್ಳುವ ಮಾರ್ಗ ಒಳಗೊಂಡಿದೆ ಎನ್ನುವ ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಮಹತ್ವ ಸಾರಿದ ಮಹಾನ್ ಶರಣ ಅಂಬಿಗರ ಚೌಡಯ್ಯ ಅವರು 12ನೇ ಶತಮಾನದಲ್ಲೇ ಅಸ್ಪೃಶ್ಯತೆಯ ವಿರುದ್ಧ ಧೈರ್ಯವಾಗಿ ಹೋರಾಡಿ, ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದುವ ಮಹತ್ವದ ಕಾರ್ಯ ಮಾಡಿದರು ಎಂದು ಅವರು ಹೇಳಿದರು.
ಸಾಹಿತಿ ಮಾಣಿಕ್ ನೇಳಗಿ ಅವರು ತಮ್ಮ ವಿಶೇಷ ಉಪನ್ಯಾಸ ನೀಡಿ, ಶರಣ ಚಳವಳಿಯಲ್ಲಿ ಪಾಲ್ಗೊಂಡು, ಸಾಮಾಜಿಕ ಪರಿವರ್ತನೆಗಾಗಿ ಬಸವಣ್ಣನವರ ಹೆಗಲಿಗೆ ಹೆಗಲಾಗಿ ನಿಂತವರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರಿಗೆ ಸಲ್ಲುತ್ತದೆ. ತನ್ನ ಸಂಪತ್ತನ್ನು ದಾನವಾಗಿ ಕೊಟ್ಟಿದ್ದರು. ಅವರು 278 ವಚನಗಳು ರಚನೆ ಮಾಡಿದ್ದಾರೆ ಎಂದು ತಿಳಿಸಿದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೂ ಮುಂಚಿತವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ, ಟೋಕರಿ ಕೋಳಿ ಸಮಾಜದ ಜಿಲ್ಲಾಧ್ಯಕ್ಷ ಜಗನ್ನಾಥ್ ಜಮಾದಾರ್, ಉಪಾಧ್ಯಕ್ಷ ಸುನಿಲ್ ಖಾಶೆಂಪುರೆ, ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ರಾಜಕುಮಾರ್ ಕರಣೆ, ಅಶೋಕ್ ಬಂಡೆ, ಸುನಿಲ್ ಭಾವಿಕಟ್ಟಿ ಹಾಗೂ ಕನ್ನಡ ಜಾನಪದ ಸದಸ್ಯ ವಿಜಯಕುಮಾರ್ ಸೋನಾರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.