×
Ad

ಬೀದರ್ | ಶಾಹೀನ್ ಶಿಕ್ಷಣ ಸಂಸ್ಥೆಯಿಂದ ಮದರಸಾ ನವೀಕರಣ ಕಾರ್ಯಕ್ಕೆ ಚಾಲನೆ

Update: 2025-10-11 23:01 IST

ಬೀದರ್ : ನಗರದ ಐತಿಹಾಸಿಕ ಮಹಮ್ಮದ್ ಗವಾನ್ ಮದರಸಾವನ್ನು ದತ್ತು ಪಡೆದಿರುವ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ, ಸ್ಮಾರಕದ ಸ್ಥಳದಲ್ಲಿ ನವೀಕರಣ ಕಾರ್ಯಕ್ಕೆ ಶುಕ್ರವಾರ ಮದರಸಾ ಆವರಣದಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ಮಾತನಾಡಿ, ಐತಿಹಾಸಿಕ ಸ್ಮಾರಕವನ್ನು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿಸುವ ದಿಸೆಯಲ್ಲಿ ಸಮೂಹವು ಅಗತ್ಯ ನವೀಕರಣ ಕಾರ್ಯ ಕೈಗೊಳ್ಳಲಿದೆ. ಸ್ಮಾರಕದ ಸ್ಥಳದಲ್ಲಿ ಲ್ಯಾಂಡ್ ಸ್ಕೇಪ್, ಪಾದಚಾರಿ ಮಾರ್ಗ, ಕಾರಂಜಿ, ಶೌಚಾಲಯ, ಶುದ್ಧ ಕುಡಿಯುವ ನೀರು, ದೀಪಾಲಂಕಾರ, ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ, ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಸಾಹಿತ್ಯದ ಕೇಂದ್ರ ಸ್ಥಾಪನೆ ಮೊದಲಾದ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.

ಸ್ಮಾರಕದ ಮಹತ್ವದ ಕುರಿತು ಸುತ್ತಮುತ್ತಲಿನ ನಿವಾಸಿಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಹೈದರಾಬಾದ್‍ಗೆ ಬರುವ ಪ್ರವಾಸಿಗರು ಇಲ್ಲಿಗೂ ಭೇಟಿ ನೀಡುವ ರೀತಿಯಲ್ಲಿ ಸ್ಮಾರಕವನ್ನು ಆಕರ್ಷಮಯ ಮಾಡಲಾಗುವುದು. ಗೈಡ್‍ಗಳಿಗೆ ತರಬೇತಿ ನೀಡಲಾಗುವುದು. ಐದು ವರ್ಷಗಳ ಅವಧಿಗೆ ಸ್ಮಾರಕದ ಸಂರಕ್ಷಣೆ ಹಾಗೂ ನಿರ್ವಹಣೆಯನ್ನು ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಶಾಹೀನ್ ಕೇಂದ್ರ ಸ್ಥಾನದಲ್ಲಿರುವ ಮಹಮ್ಮದ್ ಗವಾನ್ ಮದರಸಾವು ಪ್ರಸಿದ್ಧ ವಿಶ್ವವಿದ್ಯಾಲಯವಾಗಿತ್ತು. 25 ದೇಶಗಳ ವಿದ್ಯಾರ್ಥಿಗಳು ಇಲ್ಲಿಗೆ ಅಧ್ಯಯನಕ್ಕೆ ಬರುತ್ತಿದ್ದರು. ವಿವಿಧ ವಿಷಯಗಳನ್ನು ಕಲಿಯುತ್ತಿದ್ದರು. ಹೀಗಾಗಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಸಮೂಹವು ಮದರಸಾವನ್ನು ದತ್ತು ಸ್ವೀಕರಿಸಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ಬಹಳಷ್ಟು ಐತಿಹಾಸಿಕ ಮಹತ್ವದ ಸ್ಮಾರಕಗಳಿವೆ. ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ನುಡಿದರು.

ಪ್ರವಾಸಿಗರ ಅನುಕೂಲಕ್ಕಾಗಿ ನಗರದ ಕೋಟೆಯಲ್ಲಿ ಶಾಹೀನ್ ಫುಡ್ ಕೋರ್ಟ್ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಟರಿ ಚಾಲಿತ ವಾಹನದ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿಶ್ರಾಂತ ಕುಲಪತಿ ಮುಹಮ್ಮದ್ ಸಲ್ಮಾನ್ ಸಿದ್ದಿಕಿ, ಮೌಲಾನಾ ಅಝರ್ ಮದನಿ, ಆರ್ಕಾಲಜಿ ಸರ್ವೇ ಆಫ್ ಇಂಡಿಯಾದ ಹಿರಿಯ ಸಂರಕ್ಷಣಾ ಸಹಾಯಕ ಅಜಯ್ ಜನಾರ್ಧನ್, ಹಿರಿಯ ಪತ್ರಕರ್ತರಾದ ದೇವು ಪತ್ತಾರ್, ರಿಷಿಕೇಶ್ ಬಹಾದ್ದೂರ್ ದೇಸಾಯಿ, ಇತಿಹಾಸಕಾರ ಸಮದ್ ಭಾರತಿ, ಡಾ. ಅಬ್ದುಲ್ ಮಾಜೀದ್, ಪ್ರೊ. ದಾನೀಶ್ ಮೊಯಿನ್, ಪ್ರೊ. ಸೈಯದ್ ಅಯುಬ್ ಅಲಿ, ಮೀರ್ ಮೊಹತೆಶಾಮ್ ಅಲಿ ಖಾನ್, ಸೈಯದ್ ಝಹಿದ್ ಅಲಿ ಅಖ್ತರ್, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಹಸೀಬ್ ಮತ್ತು ತೌಸಿಫ್ ಮಡಿಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News