ಬೀದರ್ | ಕರ್ನಾಟಕ ರಾಜ್ಯ ಯುವ ಆಯೋಗ ಸ್ಥಾಪನೆಗೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ನಿಂದ ಮನವಿ
ಬೀದರ್: ಕರ್ನಾಟಕದ ಯುವಜನರ ಹಿತಾಸಕ್ತಿ ರಕ್ಷಣೆ ಹಾಗೂ ಅವರ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವು ತಕ್ಷಣವೇ 'ಕರ್ನಾಟಕ ರಾಜ್ಯ ಯುವ ಆಯೋಗʼವನ್ನು ಸ್ಥಾಪಿಸಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ (SYM) ಸಂಘಟನೆ ಒತ್ತಾಯಿಸಿದೆ.
ಶನಿವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ ಸಂಘಟನೆಯ ಪದಾಧಿಕಾರಿಗಳು, ಯುವಜನತೆ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದರು.
ಮನವಿ ಪತ್ರದಲ್ಲಿ ಉಲ್ಲೇಖಿಸಿರುವಂತೆ, ಕರ್ನಾಟಕದಲ್ಲಿ ಎರಡು ಕೋಟಿಗೂ ಹೆಚ್ಚು ಯುವಜನರಿದ್ದು, ಅವರು ಶಿಕ್ಷಣ, ಉದ್ಯೋಗ ಹಾಗೂ ಮಾನಸಿಕ ಆರೋಗ್ಯದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಗೃಹ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, 2022ರಿಂದ 2025ರ ನವೆಂಬರ್ ಅವಧಿಯಲ್ಲಿ ರಾಜ್ಯದಲ್ಲಿ 9,450 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಯುವಜನರ ಸಂಖ್ಯೆಯೇ ಹೆಚ್ಚಿದೆ. ಸುಮಾರು ಶೇ. 30ರಷ್ಟು ಯುವಕರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
2022ರಲ್ಲಿ ರಾಜ್ಯ ಯುವ ನೀತಿ ಜಾರಿಗೆ ಬಂದಿದ್ದರೂ, ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಯಾವುದೇ ಕಾನೂನುಬದ್ಧ ಸಂಸ್ಥೆ ಇಲ್ಲದಿರುವುದು ದೊಡ್ಡ ನ್ಯೂನ್ಯತೆಯಾಗಿದೆ. ಕೇರಳ, ಅಸ್ಸಾಂ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಯುವ ಆಯೋಗಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಆಯೋಗದ ಅಗತ್ಯವಿದೆ ಎಂದು ಸಂಘಟನೆ ತಿಳಿಸಿದೆ.
ಈ ಸಂದರ್ಭದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ (SYM) ಸಂಘಟನೆಯ ಜಿಲ್ಲಾಧ್ಯಕ್ಷ ಶಿಯುಬುದ್ದೀನ್, ರಫೀಯುದ್ದೀನ್ ಶೋಯಬ್, ಸೈಯದ್ ಫರಾಜ್ ಅಲಿ ಹಾಗೂ ರಾಜ್ಯ ಕಾರ್ಯದರ್ಶಿ ಅಸದುಲ್ಲಾ ಖಾನ್ ಉಪಸ್ಥಿತರಿದ್ದರು.