ಬೀದರ್ | ಕಳ್ಳತನ ಪ್ರಕರಣದ ಆರೋಪಿಯ ಬಂಧನ : 6 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳು ವಶ
ಬೀದರ್ : ನಗರದ ಮಾರ್ಕೆಟ್ ಪೊಲೀಸ್ ಠಾಣೆಯ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ಆತನಿಂದ 6 ಲಕ್ಷ 37 ಸಾವಿರ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಎಸ್ಪಿ ಪ್ರದೀಪ್ ಗುಂಟಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಜಿಲ್ಲೆಯ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ಆತನಿಂದ ಸುಮಾರು 6 ಲಕ್ಷ 37 ಸಾವಿರ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ನಗರದ ಮಾರ್ಕೆಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ ಸುಮಾರು 2 ಲಕ್ಷ 40 ಸಾವಿರ ಮೌಲ್ಯದ 30 ಗ್ರಾಂ ಚಿನ್ನದ ಬಿಸ್ಕತ್ತು, 2 ಲಕ್ಷ ಮೌಲ್ಯದ 25 ಗ್ರಾಂ ಚಂಪಾಕಲಿ ಕೊರಳಿನ ಸರ, 96 ಸಾವಿರ ಮೌಲ್ಯದ 12 ಗ್ರಾಂ ಚಿನ್ನದ ಲಾಕೆಟ್, 40 ಸಾವಿರ ರೂ. ಬೆಲೆ ಬಾಳುವ 05 ಗ್ರಾಂ. ಚಿನ್ನದ ಸುತ್ತುಂಗುರ ಹಾಗೂ 24 ಸಾವಿರ ಮೌಲ್ಯವುಳ್ಳ 3 ಗ್ರಾಂ ಚಿನ್ನದ ಪದಕ ಹಾಗೂ ಗುಂಡುಗಳು ಹೀಗೆ ಒಟ್ಟು ಸುಮಾರು 6,37,500 ರೂ. ಬೆಲೆ ಬಾಳುವ 7.5 ತೊಲೆ ಚಿನ್ನದ ಆಭರಣಗಳು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಎಸ್ಪಿ ಪ್ರದೀಪ್ ಗುಂಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.