ಬೀದರ್ | ಮೈಕ್ರೋ ಫೈನಾನ್ಸ್ ಸಾಲದ ಹೊರೆ ತಾಳಲಾರದೆ ಮಹಿಳೆ ಆತ್ಮಹತ್ಯೆ: ದೂರು
ಬೀದರ್: ಮಹಿಳೆಯೊಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಲಸೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಗಡಿ ಗೌಡಗಾಂವ್ ಗ್ರಾಮದಲ್ಲಿ ನಡೆದಿದ್ದು, ಮೈಕ್ರೋ ಫೈನಾನ್ಸ್ ನ ಸಾಲಬಾಧೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ರೇಷ್ಮಾ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ರೇಷ್ಮಾ ಅವರು ಧರ್ಮಸ್ಥಳ, ಚೈತನ್ಯ, ನಯ ಚೈತನ್ಯ, ಎಲ್.ಎನ್.ಟಿ., ಟಾಟಾ, ಸಮಸ್ತ ಸೇರಿದಂತೆ ಸುಮಾರು 7ರಿಂದ 8 ಮೈಕ್ರೋಫೈನಾನ್ಸ್ ಸಂಘಗಳಲ್ಲಿ ಸುಮಾರು 4 ಲಕ್ಷ ರೂ. ವರೆಗೆ ಸಾಲ ಮಾಡಿದ್ದರು. ಅವರು ತಿಂಗಳಿಗೆ ಸುಮಾರು 20ರಿಂದ 22 ಸಾವಿರ ರೂ. ಸಾಲ ಕಟ್ಟಬೇಕಾಗಿತ್ತು. ಮೈಕ್ರೋ ಫೈನಾನ್ಸ್ ಸಂಘಗಳ ಏಜೆಂಟರು ದಿನಾಲು ಮುಂಜಾನೆ ಮನೆಗೆ ಬಂದು ದುಡ್ಡು ಕೊಡುವವರೆಗೆ ಮನೆಯಿಂದ ಹೋಗುತ್ತಿರಲಿಲ್ಲ. ಹಾಗಾಗಿ ಸಾಲ ಕಟ್ಟಲಾಗದೆ ಹತಾಶರಾಗಿ, ಜ.22ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ರೇಷ್ಮಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಮೈದುನ ವಿಶಾಲ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಹುಲಸೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.