ಬೀದರ್ | ವಸಂತ ಕಾಲೇಜಿನ ಸೂಪರಿಂಟೆಂಡೆಂಟ್ ವಿರುದ್ಧ 2 ಕೋಟಿಗೂ ಅಧಿಕ ರೂ. ವಂಚನೆ ಆರೋಪ; ಪ್ರಕರಣ ದಾಖಲು
ಬೀದರ್ : ನಗರದ ವಸಂತ ಕಾಲೇಜಿನ ಅಧ್ಯಕ್ಷ ಚಂದ್ರಕಾಂತ್ ಅವರು ಅದೇ ಕಾಲೇಜಿನ ಸೂಪರಿಂಟೆಂಡೆಂಟ್ ಎಲಿಜರ್ ಮಿತ್ರಾ ಅವರ ವಿರುದ್ಧ 2 ಕೋಟಿ 44 ಲಕ್ಷ 56 ಸಾವಿರ ರೂ. ವಂಚನೆ ಆರೋಪ ಮಾಡಿದ್ದು, ಪ್ರಕರಣ ದಾಖಲಾಗಿದೆ.
ಎಲಿಜರ್ ಮಿತ್ರಾ ಅವರು ನನ್ನ ಪತ್ನಿಯ ಅಣ್ಣನ ಮಗನಾಗಿದ್ದು, ಇತನನ್ನು 2014 ರಲ್ಲಿ ನಮ್ಮ ಕಾಲೇಜಿನ ಸೂಪರಿಂಟೆಂಡೆಂಟ್ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. ನಮ್ಮ ಸಂಸ್ಥೆಯ ದೈನಂದಿನ ಕಾರ್ಯ ಚಟುವಟಿಕೆ ಇವನೇ ನೋಡಿಕೊಳ್ಳುತ್ತಿದ್ದನು. ನಾವು ಈತನ ಮೇಲೆ ವಿಶ್ವಾಸ ಇಟ್ಟಿದ್ದೇವು. ಆದರೆ ಈತನು ನಮ್ಮ ಸಂಸ್ಥೆಯ ನಕಲು ರಶೀದಿ ಮಾಡಿ ನಮಗೆ ವಂಚಿಸಿದ್ದಾನೆ ಎಂದು ಚಂದ್ರಕಾಂತ್ ಅವರು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳಿಂದ ನಮ್ಮ ಸಂಸ್ಥೆಗೆ ಬರಬೇಕಿದ್ದ ಹಣವನ್ನು ನಮ್ಮ ಸಂಸ್ಥೆಯ ಪ್ರಾಂಶುಪಾಲ ಮತ್ತು ನನ್ನ ಗಮನಕ್ಕೆ ತರದೇ ತನ್ನ ಖಾತೆಗೆ ಹಾಕಿಸಿಕೊಂಡು, ವಿದ್ಯಾರ್ಥಿಗಳಿಗೆ ನಕಲು ರಶೀದಿ ನೀಡಿದ್ದಾನೆ. 2019 ರಿಂದ 2025ರ ವರೆಗೆ ಸುಮಾರು 2 ಕೋಟಿ 44 ಲಕ್ಷ 56 ಸಾವಿರ ರೂ. ವಂಚನೆ ಮಾಡಿದ್ದಾನೆ ಎಂದು ದೂರಿದ್ದಾರೆ.
ವಿಶ್ವವಿದ್ಯಾಲಯದ ನಿಯಮದ ಪ್ರಕಾರ ಪರೀಕ್ಷಾ ಶುಲ್ಕವನ್ನು ಕಾಲೇಜು ಅಥವಾ ಶಾಲೆಯ ಖಾತೆಯಿಂದ ನೇರವಾಗಿ ವಿಶ್ವವಿದ್ಯಾಲದ ಖಾತೆಗೆ ಜಮೆ ಮಾಡಬೇಕು. ಆದರೆ ಈತನು ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ನೇರವಾಗಿ ತನ್ನ ಖಾತೆಯಿಂದಲೆ ಜಮೆ ಮಾಡಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಎಲಿಜರ್ ಮಿತ್ರಾ ಒಬ್ಬ ಸರ್ಕಾರಿ ಸ್ಟಾಫ್ ನರ್ಸ್ ಆಗಿ ಮನ್ನಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ. ಒಂದು ಕಡೆ ಸರ್ಕಾರಕ್ಕೂ ವಂಚನೆ ಮಾಡಿದ್ದು, ನಮ್ಮ ಸಂಸ್ಥೆಗೂ ವಂಚಿಸಿದ್ದಾನೆ. ಇದರ ಬಗ್ಗೆ ಕೇಳಲು ಹೋದರೆ ನಮಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.