ಡಿ.7ರಂದು ಬಸವಕಲ್ಯಾಣದಲ್ಲಿ ಸೂಫಿ ಸಂತ ಸಮ್ಮೇಳನ: ಸಲೀಂ ಅಹಮ್ಮದ್
ಬೀದರ್ : ಡಿ.7ರಂದು ಶರಣರ ನಾಡು ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಸೂಫಿ ಸಂತರ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಮುಖ್ಯ ಸಚೇತಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಲೀಂ ಅಹಮ್ಮದ್, ಡಿ. 7 ರ ಸಾಯಂಕಾಲ 6 ಗಂಟೆಗೆ ಬಸವಕಲ್ಯಾಣದ ಅಲ್ಫಾ ಕಾಲೋನಿಯ ಮೈದಾನದಲ್ಲಿ ಸೂಫಿ ಸಂತರ ಸಮಾವೇಶ ಆಯೋಜಿಸಲಾಗಿದೆ. ಪ್ರವಾದಿಯವರ 1,500ನೇ ವಾರ್ಷಿಕೋತ್ಸವ ಆಚರಣೆ ಈಗಾಗಲೇ ಹುಬ್ಬಳ್ಳಿ ಮತ್ತು ಕೊಪ್ಪಳದಂತಹ ನಗರಗಳಲ್ಲಿ ಆಚರಿಸಲಾಗಿದ್ದು ಇದು ಮೂರನೇ ಸಮಾವೇಶವಾಗಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಖ್ಯಾತಿಯ ಮೌಲಾನಾ ಮುಹಮ್ಮದ್ ಒಬೈದುಲ್ಲಾ ಖಾನ್ ಆಝ್ಮಿ, ರಾಜ್ಯಸಭೆಯ ಮಾಜಿ ಸದಸ್ಯ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ, ಮಂಡಳಿಯ ಸದಸ್ಯ ಮೌಲಾನಾ ಅಬು ತಾಲಿಬ್ ರಹಮಾನಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ವಕ್ಫ ಕಮಿಟಿ ಅಧ್ಯಕ್ಷ ಹಾಗೂ ಹಜರತ್ ಹಫೀಜ್ ಅಲಿ ಮುಹಮ್ಮದ್ ಅಲ್ ಹುಸೈನಿ, ಖ್ವಾಜಾ ಬಂದೆ ನವಾಜ್ ದರ್ಗಾದ ಸಜ್ಜಾದಾ ಅವರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಮಾಜಿ ಎಂಎಲ್ಸಿ ಅರವಿಂದಕುಮಾರ್ ಅರಳಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ನಾಸಿರ್ ಹುಸೇನ್, ಉತ್ತರ ಪ್ರದೇಶದ ಉಸ್ತುವಾರಿ ಸಂಸದ ಇಮ್ರಾನ್ ಮಸೂದ್, ತೆಲಂಗಾಣದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮೊಹಮ್ಮದ್ ಅಝರೋದ್ದೀನ್ ಮತ್ತು ಕೆ ಕೆ ಆರ್ ಡಿ ಬಿ ಅಧ್ಯಕ್ಷ ಮತ್ತು ಶಾಸಕ ಡಾ. ಅಜಯ್ ಸಿಂಗ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮಾತನಾಡಿ, ಸೂಫಿ ಸಂತರ ಸಮಾವೇಶ ಕಾರ್ಯಕ್ರಮವು ಈಗಾಗಲೇ ಹುಬ್ಬಳ್ಳಿ ಹಾಗೂ ಕೊಪ್ಪಳದಲ್ಲಿ ಯಶಸ್ವಿಯಾಗಿ ನಡೆದಿದೆ. ಈಗ ನಮ್ಮ ಶರಣರ ನಾಡು ಬಸವಕಲ್ಯಾಣದಿಂದ ನಾಡಿಗೆ ಸನ್ಮಾರ್ಗದ ಸಂದೇಶ ಸಾರುವ ಉದ್ದೇಶದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಆದ್ದರಿಂದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮನ್ನಾನ್ ಸೇಠ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಸಯ್ಯದ್ ಅಲಿ ಖಾದ್ರಿ ಮತ್ತು ಇತರರು ಉಪಸ್ಥಿತರಿದ್ದರು.