ಬೀದರ್ | ವಿನಯ ಮಾಳಗೆ ಅವರಿಗೆ ರಾಜ್ಯ ಯುವ ಪ್ರಶಸ್ತಿ ಪ್ರಧಾನ
ಬೀದರ್ : ಜಿಲ್ಲೆಯ ಕರ್ನಾಟಕ ವನ್ಯಜೀವಿ ಮಂಡಳಿಯ ಸದಸ್ಯ ಹಾಗೂ ಟೀಂ ಯುವ ಸಹ ಸಂಸ್ಥಾಪಕ ವಿನಯ ಮಾಳಗೆ ಅವರು ರಾಜ್ಯ ಯುವ ಪ್ರಶಸ್ತಿಗೆ ಭಾಜನರಾಗಿದ್ದು, ಇಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಕರ್ನಾಟಕ ಯುವ ಸಂಘ ಸಂಸ್ಥೆಗಳ ಒಕ್ಕೂಟ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಖಿಲ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ನೀಡಲಾಗುವ ಕರ್ನಾಟಕ ರಾಜ್ಯ ಯುವ ಪ್ರಶಸ್ತಿ ಇಂದು ಬೆಂಗಳೂರಿನ ಸರ್ ಪುಟ್ಟಣ್ಣಶೆಟ್ಟಿ ಪುರಭವನದ ಟೌನ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ನೀಡಲಾಯಿತು.
ರಾಜ್ಯ ಮಟ್ಟದ ಯುವ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲೆ, ಕ್ರೀಡೆ, ಸಮಾಜ ಸೇವೆ, ಪರಿಸರ ಸಂರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗೈದ 30 ಜನ ಯುವ ಸಾಧಕರಿಗೆ ಈ ವರ್ಷದ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಧ್ಯಕ್ಷ ಶ್ರೀ ಬಸವರಾಜ್ ಹೊರಟ್ಟಿ, ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ಕರ್ನಾಟಕ ರಾಜ್ಯ ಜನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಳ್ಳಿ ಶಿವಪ್ರಸಾದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಡಾ. ಸಿ. ಸೋಮಶೇಖರ್, ಕಲಾವಿದ ಜಿ. ಕಪ್ಪಣ್ಣ, ಚೇತನ್ ಆರ್, ರೋಶನಿ ಗೌಡ, ವಿಜಯಕುಮಾರ್ ಸೋನಾರೆ, ಪ್ರಕಾಶ್ ಅಂಗಡಿ, ಶಿವಕುಮಾರ ಎಚ್ ಎಂ, ಪನೀಂದ್ರ ಪ್ರಸಾದ್, ಬೀದರ್ ಜಿಲ್ಲೆಯಿಂದ ಆಗಮಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ದೆ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ರಾಜ್ಯಾಧ್ಯಕ್ಷ ಮಹೇಶ್ ಗೋರನಾಳ್ಕರ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿನೋದಕುಮಾರ್ ಬಂದಗೇ ಹಾಗೂ ಹಿರಿಯ ಸಾಹಿತಿ ಪಾರ್ವತಿ ಸೋನಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.