×
Ad

ಬೀದರ್ | ಮಳೆ ಹಾನಿ ಪ್ರದೇಶಗಳಿಗೆ ತಕ್ಷಣವೇ ಪರಿಹಾರ ನೀಡಲು ವೆಲ್ವೇರ್ ಪಾರ್ಟಿ ಆಫ್ ಇಂಡಿಯಾ ಮನವಿ

Update: 2025-08-21 17:45 IST

ಬೀದರ್ : ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸೇತುವೆಗಳು, ಮನೆಗಳು ಹಾನಿಗೊಳಗಾಗಿವೆ. ಈ ಹಿನ್ನೆಲೆಯಲ್ಲಿ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಪರಿಹಾರ ವಿತರಣೆ ಮಾಡಬೇಕು ಎಂದು ವೆಲ್ವೇರ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯು ಒತ್ತಾಯಿಸಿದೆ.

ಇಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಜಿಲ್ಲಾದ್ಯಂತ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು. ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಧಾನ್ಯ, ಬಟ್ಟೆ, ಪಾತ್ರೆ ಹಾಳಾದ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ನೀಡಬೇಕು. ಮನೆಗಳಿಗೆ ಆಗಿರುವ ಹಾನಿ ಕುರಿತು ತಿಳಿಯಲು ಸಮಗ್ರ ವರದಿ ತರಿಸಿ, ಎನ್.ಡಿ.ಆರ್.ಎಫ್. ಹಾಗೂ ಎಸ್.ಡಿ.ಆರ್.ಎಫ್. ನಿಯಮಗಳಂತೆ ಪರಿಹಾರ ನೀಡಬೇಕು. ರಸ್ತೆ ಸಂಪರ್ಕ ಕಡಿದುಕೊಂಡಿರುವ ಗ್ರಾಮಗಳಿಗೆ ತುರ್ತಾಗಿ ಪರ್ಯಾಯ ಸಂಪರ್ಕ ಕಲ್ಪಿಸಿ, ರಸ್ತೆ ಪುನ‌ರ್ ನಿರ್ಮಾಣಕ್ಕೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಲಾಗಿದೆ.

ನಾಶವಾಗಿರುವ ಬೆಳೆಗೆ ಬೆಳೆ ವಿಮೆ ಪಾವತಿಸಿದ ಎಲ್ಲ ರೈತರಿಗೆ ವಿಮಾ ಕಂಪನಿ ಈ ಕೂಡಲೆ ಶೇ.25 ರಷ್ಟು ಬೆಳೆ ವಿಮೆಯ ಹಣವನ್ನು ರೈತರ ಖಾತೆಗೆ ಜಮೆ ಮಾಡಬೇಕು. ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಒದಗಿಸಬೇಕು. ಕುಸಿತಗೊಂಡ ಮನೆಗಳಿಗೆ ತುರ್ತಾಗಿ ಒಂದು ಲಕ್ಷ ರೂ. ಪರಿಹಾರ ನೀಡಬೇಕು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಧಾನ್ಯ, ಬಟ್ಟೆ, ಪಾತ್ರೆ ಹಾಳಾದುದಕ್ಕೆ ತಕ್ಷಣವೇ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ವೆಲ್ವೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಮುಬಶೀರ್ ಶಿಂಧೆ, ಮುಖಂಡರಾದ ಸೈಯದ್ ಇಬ್ರಾಹಿಂ, ಶರಣಪ್ಪ, ಮುಹಿ ನಾಝ್, ಆಸಿಫ್ ಬೋರ್ಗಿ, ಎಂ.ಡಿ ಯಾಸೀನ್ ಅಮೀನ್, ಅಮಾನುದ್ದೀನ್, ಎಂಡಿ ಶೆರೋಹ್, ಎಂ.ಡಿ ವಿಕರ್, ಅಹಮದ್, ಎಂ.ಡಿ ಫೈಜಾನ್ ಹಾಗೂ ಮುಹಮ್ಮದ್ ಸಿರಾಜ್ ಪಟೇಲ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News