Saudi Arabia | ಉಮ್ರಾ ಯಾತ್ರಿಕರಿದ್ದ ಬಸ್ ಅಪಘಾತ ಪ್ರಕರಣ; ಬೀದರ್ ಮೂಲದ ಮಹಿಳೆ ಮೃತ್ಯು
ಬೀದರ್ : ಮಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಉಮ್ರಾ ಯಾತ್ರಿಕರಿದ್ದ ಬಸ್ ಸೌದಿ ಅರೇಬಿಯಾದ ಮುಫ್ರಿಹತ್ ಬಳಿ ಸೋಮವಾರ ಮುಂಜಾನೆ ಡೀಸೆಲ್ ಟ್ಯಾಂಕರ್‌ಗೆ ಢಿಕ್ಕಿ ಹೊಡೆದ ಪರಿಣಾಮ 45 ಮಂದಿ ಭಾರತೀಯ ಯಾತ್ರಿಕರು ಮೃತಪಟ್ಟಿದ್ದರು. ಈ ಬಸ್ ಅಪಘಾತದಲ್ಲಿ ಬೀದರ್ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಧೃಡಪಡಿಸಿದ್ದಾರೆ.
ಬೀದರ್ ನಗರದ ಮೈಲೂರು ಬಡಾವಣೆಯ ರೆಹಮತ್ ಬಿ (80) ಬಸ್ ದುರಂತದಲ್ಲಿ ಮೃತಪಟ್ಟ ಮಹಿಳೆ.
ಕೇಂದ್ರ ಸರಕಾರ ಎಲ್ಲಾ ಮೃತದೇಹಗಳನ್ನು ಒಂದೇ ಬಾರಿಗೆ ಭಾರತಕ್ಕೆ ತರಲು ವ್ಯವಸ್ಥೆ ಮಾಡಿದೆ. ಭಾರತಕ್ಕೆ ಬಂದಾಗ ಮೃತದೇಹಗಳ ಮುಂದಿನ ಪ್ರಕ್ರಿಯೆ ನಡೆಸಲಾಗುವುದು ಎಂದು ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.
ನಮ್ಮ ಕುಟುಂಬದಿಂದ ಸೌದಿ ಅರೇಬಿಯಾಗೆ ರೆಹಮತ್ ಬಿ ಅವರು ಒಬ್ಬರೇ ಹೈದ್ರಾಬಾದ್‌ನ ಮಸಾ ಟ್ರಾವೆಲ್ಸ್ ವತಿಯಿಂದ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿನ ಬಸ್ ದುರಂತದಲ್ಲಿ ಅವರು ಮೃತಪಟ್ಟಿದ್ದಾರೆ. ಬೀದರ್ ನ ಮೈಲೂರು-ಗುಂಪಾಗೆ ಹೋಗುವ ರಸ್ತೆಯಲ್ಲಿ ಇವರ ಮನೆ ಇದೆ. ನಾವೆಲ್ಲರೂ ಹೈದ್ರಾಬಾದ್ ನಲ್ಲಿದ್ದು, ಅವರ ಮನೆಯಲ್ಲಿ ಸದ್ಯಕ್ಕೆ ಅವರ ಮಗಳು ಒಬ್ಬರನ್ನು ಬಿಟ್ಟು ಬೇರೆ ಯಾರು ಇಲ್ಲ. ಬೀದರ್‌ನ ಶಾಸಕರು ಹಾಗೂ ಜಿಲ್ಲಾಡಳಿತ ನಮಗೆ ಸಹಾಯ ಮಾಡಬೇಕು ಎಂದು ಮೃತ ಮಹಿಳೆಯ ಸಂಬಂಧಿ ಸೀಜರ್ ಅಹಮ್ಮದ್ ಅವರು ಮನವಿ ಮಡಿಕೊಂಡಿದ್ದಾರೆ.
ಹುಬ್ಬಳ್ಳಿ ಮೂಲದ ಅಬ್ದುಲ್ ಘನಿ ಎಂಬವರು ಕೂಡ ಇದೇ ಅಪಘಾತದಲ್ಲಿ ಮೃತಪಟ್ಟಿದ್ದಾರೆ.