×
Ad

ಹೊಸ ಅನಧಿಕೃತ ಪಂಪಸೆಟ್‌ಗಳ ಸಂಪರ್ಕಕ್ಕೆ ಬ್ರೇಕ್ ಹಾಕಲು ಕ್ಯಾಬಿನೆಟ್‌ನಲ್ಲಿ ಅಂತಿಮ ತೀರ್ಮಾನ : ಸಚಿವ ಕೆ.ಜೆ.ಜಾರ್ಜ್

Update: 2025-11-26 17:29 IST

ವಿಜಯನಗರ : ರೈತರು ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮವಾಗಿ ಪಡೆದಿರುವ ವಿದ್ಯುತ್ ಸಂಪರ್ಕವನ್ನು ಸಕ್ರಮ ಮಾಡಲು ರಾಜ್ಯದಲ್ಲಿ 4.5 ಲಕ್ಷ ಪಂಪ್ ಸೆಟ್‌ಗಳನ್ನು ಗುರುತಿಸಿ ಸಕ್ರಮಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಇದನ್ನು ಇದೇ ರೀತಿ ಮುಂದುವರೆಸಲು ಸಾಧ್ಯವಿಲ್ಲ. ಈ ಬಗ್ಗೆ ಕ್ಯಾಬಿನೆಟ್ ಮುಂದೆ ತಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು, ಜೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಕೈಗೊಂಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಜೆ.ಜಾರ್ಜ್, ಅಕ್ರಮ ಸಕ್ರಮಕ್ಕಾಗಿ ಪಾವತಿಸಿದ ನೋಂದಾಣಿ ಶುಲ್ಕ 50ರೂ.ಗಳಿಂದ 25,000 ರೂ.ವೆರೆಗೆ ಶುಲ್ಕ ಪಾವತಿಸಿದ ಎಲ್ಲಾ ರೈತರ ಪಂಪ್‌ಸೆಟ್‌ಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ವಿದ್ಯುತ್ ಕಂಬದಿಂದ 500 ಮೀಟರ್ ಒಳಗಿನ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, 500 ಮೀಟರ್‌ಗಿಂತ ಹೆಚ್ಚು ದೂರವಿರುವ ಪಂಪ್‌ಸೆಟ್‌ಗಳಿಗೆ ಕುಸುಮ್ ಬಿ ಯೋಜನೆಯಡಿ ಕೇಂದ್ರ ಸರಕಾರದ ಶೇ.30 ಮತ್ತು ರಾಜ್ಯ ಸರಕಾರದ ಶೇ.50ರಷ್ಟು ಸಬ್ಸಿಡಿಯೊಂದಿಗೆ ಸೋಲಾರ್ ವಿದ್ಯುತ್ ಕಲ್ಪಿಸಲಾಗುತ್ತದೆ. ಸೋಲಾರ್ ಪಂಪ್‌ನಿಂದ ಸಾವಿರ ಅಡಿವರೆಗೆ ಪಂಪ್ ಮಾಡುವ ಸಾಮಾರ್ಥ್ಯವಿರುತ್ತದೆ. ಈ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗಳಿಗಾಗಿ ಟಿಸಿ ಬ್ಯಾಂಕ್ ಮತ್ತು ರೀಪೇರಿ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ. ವಿಫಲವಾದ ವಿದ್ಯುತ್ ಪರಿವರ್ತಕಗಳನ್ನು ರೀಪೇರಿ ಸೆಂಟರ್‌ಗಳಿಗೆ ತರುವಾಗ ಹೆಸ್ಕಾಂಗಳಿಂದಲೇ ವಾಹನದ ವ್ಯವಸ್ಥೆ ಮಾಡಿ ಟಿಸಿಯನ್ನು ರೈತರ ಜಮೀನಿನಿಂದ ರೀಪೇರಿ ಸೆಂಟರ್‌ಗಳಿಗೆ ತರಬೇಕು. ಆದರೆ ಯಾವುದೇ ಕಾರಣಕ್ಕೂ ರೈತರೇ ವಾಹನ ತೆಗೆದುಕೊಂಡು ಹೋಗಿ ರೀಪೇರಿ ಕೇಂದ್ರಕ್ಕೆ ಟಿಸಿ ತರುವ ಪದ್ದತಿಯನ್ನು ಅನುಸರಿಸಬಾರದು. ಇಂತಹ ಕ್ರಮಗಳು ಕಂಡಬಂದಲ್ಲಿ ಅಂತಹ ಸಿಬ್ಬಂದಿ ಮತ್ತು ಇಂಜಿನಿಯರ್‌ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ. ಸಕಾಲದಲ್ಲಿ ವಿದ್ಯುತ್ ಪರಿವರ್ತಕ ಅಳವಡಿಕೆಗೆ ಕ್ರಮ ವಹಿಸಬೇಕು. ಸಾಮಾನ್ಯವಾಗಿ ಒಂದೇ ವಿದ್ಯುತ್ ಪರಿವರ್ತಕಕ್ಕೆ ಹಲವು ಪಂಪ್ ಸೆಟ್‌ಗಳ ಸಾಮರ್ಥ್ಯ ಮೀರಿ ಸಂಪರ್ಕ ಕಲ್ಪಿಸಿದಾಗ ವಿಫಲವಾಗುತ್ತವೆ. ಪವರ್ ಮ್ಯಾನ್‌ಗಳು ಮತ್ತು ಇಂಜಿನಿಯರ್‌ಗಳು ಓವರ್ ಲೋಡ್ ಆಗದಂತೆ ನೋಡಿಕೊಳ್ಳುವುದು ಅವರ ಕರ್ತವ್ಯವಾಗಿದೆ ಎಂದರು.

ವಿದ್ಯುತ್ ಉತ್ಪಾದನೆಯಲ್ಲಿ ಸಾಕಷ್ಟು ಪ್ರಗತಿ ಕಾಣುತ್ತಿದ್ದು ಸ್ವಾವಲಂಬಿಯತ್ತ ಸಾಗುತ್ತಿದ್ದೇವೆ. ವಿದ್ಯುತ್ ವಿತರಣೆ ಜಾಲವನ್ನು ಅಧುನೀಕರಣಗೊಳಿಸುವ ಮೂಲಕ ಪದೇ ಪದೇ ವಿದ್ಯುತ್ ಸಮಸ್ಯೆ ತಪ್ಪಿಸಲು ಹಂತ ಹಂತವಾಗಿ ವಿತರಣಾ ಜಾಲವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ವೋಲ್ಟೇಜ್ ಸಮಸ್ಯೆಯನ್ನು ನೀಗಿಸಲು ಈ ವರ್ಷ ನೂರು ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು. 

ಹಂಪಿ ಕನ್ನಡ ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ 750 ಎಕರೆ ಜಮೀನು ಇದೆ. ಇಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಸಾಕಷ್ಟು ಅವಕಾಶವಿದೆ. ಇದರಿಂದ ವಿಶ್ವವಿದ್ಯಾನಿಲಯಕ್ಕೆ ಆದಾಯವು ಬರಲಿದೆ. ಇಲ್ಲಿ ಸೋಲಾರ್ ಅಳವಡಿಕೆ ಬಗ್ಗೆ ಕುಲಪತಿಗಳು ಚರ್ಚಿಸಿದ್ದಾರೆಂದು ಶಾಸಕರಾದ ಹೆಚ್.ಆರ್.ಗವಿಯಪ್ಪ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಸಚಿವರು ಈ ಬಗ್ಗೆ ಕೆಪಿಟಿಸಿಎಲ್ ತಾಂತ್ರಿಕ ತಂಡದವರು ಪರಿಶೀಲನೆ ನಡೆಸುವರು. 25 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 100 ಎಕರೆಯಷ್ಟು ಜಾಗ ಬೇಕಾಗುತ್ತದೆ. ಬಾಡಿಗೆಯಾಗಿ ಪ್ರತಿ ಎಕರೆಗೆ 30 ಸಾವಿರ ನೀಡಲು ಅವಕಾಶವಿದೆ ಎಂದರು.

ಈ ವೇಳೆ ಸಂಸದ ಈ.ತುಕಾರಾಂ, ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ, ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್‌, ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ್, ಗು.ವಿ.ಸ.ಕಂ.ನಿ ಕಲಬುರಗಿ ಅಧ್ಯಕ್ಷ ಪ್ರವೀಣ್ ಕುಮಾರ್ ಹರವಾಳ, ಕ.ವಿ.ಪ್ರ.ನಿ.ನಿ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ ಪಾಂಡೆ, ಕ.ವಿ.ಪ್ರ.ನಿ.ನಿ ಕಲಬುರಗಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜ್ಫೇ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಲಿ ಅಕ್ರಮ ಷಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News