ಸಾಲದ ಹಣ ಮರಳಿಸದ ಆರೋಪ : ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲು
ಶಾಸಕ ಶರಣು ಸಲಗರ್
ಬೀದರ್ : ವಿಧಾನಸಭೆ ಚುನಾವಣೆ ವೇಳೆ ನೀಡಿದ 99 ಲಕ್ಷ ರೂ. ಹಣವನ್ನು ಮರಳಿ ನೀಡಲಿಲ್ಲ ಎಂದು ಆರೋಪದಲ್ಲಿ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬಸವಕಲ್ಯಾಣ ನಗರದ ಜೈ ಶಂಕರ್ ಕಾಲೋನಿಯ ನಿವಾಸಿ ಸಂಜುಕುಮಾರ್ ಸುಗುರೆ ಎಂಬವರು ದೂರು ನೀಡಿದ್ದು, ಬೆಂಗಳೂರಿನ ಎ.ಸಿ.ಜೆ.ಎಂ ನ್ಯಾಯಾಲಯ ಆದೇಶದ ಮೇರೆಗೆ ಶನಿವಾರ ಬಸವಕಲ್ಯಾಣದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಶರಣು ಸಲಗರ್ ಅವರು 2023ರಲ್ಲಿ ನಡೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಚುನಾವಣೆಯ ತಯಾರಿಯಲ್ಲಿದ್ದಾಗ ಜನವರಿ 2023 ರಿಂದ ಫೆಬ್ರವರಿ 2023 ರ ಎರಡನೇ ವಾರದವರೆಗೆ ಸಲಗರ್ ಅವರಿಗೆ ಸಂಜುಕುಮಾರ್ ಸುಗುರೆ ಅವರು ಒಟ್ಟು 99 ಲಕ್ಷ ರೂ. ಮುಂಗಡವಾಗಿ ಸಾಲ ನೀಡಿದ್ದರು. ಶರಣು ಸಲಗರ್ ಅವರು ಈ ಸಾಲವನ್ನು 6 ತಿಂಗಳಲ್ಲಿ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಸಾವಲವನ್ನು ಮರುಪಾವತಿ ಮಾಡಲಿಲ್ಲ ಎಂದು ದೂರಲ್ಲಿ ಆರೋಪಿಸಲಾಗಿದೆ.
ಈ ಹಿಂದೆಯೂ ಹಲವಾರು ಬಾರಿ ದೂರುದಾರರಿಂದ ಹಣ ಪಡೆದಿದ್ದ ಸಲಗರ್ ಆ ಹಣವನ್ನು ವಾಪಸ್ ಮರಳಿಸಿದ್ದರು. ಅದೇ ನಂಬಿಕೆಯ ಮೇಲೆ ದೂರುದಾರರು ಈ ಸಾಲವನ್ನು ನೀಡಿದ್ದರು. ದೂರುದಾರ ಹಾಗೂ ಆರೋಪಿಯು ದೂರದ ಸಂಬಂಧಿಗಳಾಗಿದ್ದು, ಇದೇ ನಂಬಿಕೆಯ ಮೇಲೆ ಹಣದ ಸಹಾಯ ಮಾಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಹಲವು ದಿನಗಳು ಕಳೆದರೂ ವಾಪಸ್ ಹಣ ನೀಡದೇ ಸತಾಯಿಸಲಾಗಿತ್ತು. ಬಳಿಕ ಸೆ. 14 ರಂದು ಹಿರಿಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶರಣು ಸಲಗರ್ ಹಣ ನೀಡಲು ಒಪ್ಪಿಕೊಂಡು ಚೆಕ್ ನೀಡಿದ್ದಾರೆ. ಆದರೆ, ಚೆಕ್ ಬ್ಯಾಂಕ್ ಗೆ ಹಾಕಿದಾಗ ಖಾತೆ ಮುಚ್ಚಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ದೂರಲಾಗಿದೆ.
ಕೊಟ್ಟ ಹಣ ಮರುಪಾವತಿಗಾಗಿ ಕೇಳಲು ಶರಣು ಸಲಗರ್ ಅವರ ಮನೆಗೆ ಹೋದ ಸುಗೂರೆ ಅವರ ಪತ್ನಿ ಹಾಗೂ ಪುತ್ರನಿಗೆ ಹಣ ನೀಡದೇ ತಮ್ಮ ಪತ್ನಿ ಹಾಗೂ ಪುತ್ರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಜೀವ ಬೇದರಿಕೆ ಹಾಕಿದ್ದಾರೆ. ಆರೋಪಿ ಸ್ಥಾನದಲ್ಲಿ ಇರುವ ಶಾಸಕ ಶರಣು ಸಲಗರ್, ಮೋಸ ಮಾಡುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ 74, 109, 314(4), 318, 351 ಮತ್ತು 352 ಬಿ. ಎನ್. ಎಸ್ 2023ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.