ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಆರೋಪ ; ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಪುತ್ರನ ವಿರುದ್ಧ ಪ್ರಕರಣ ದಾಖಲು
ಬೀದರ್ : ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡಿದ ಆರೋಪದಲ್ಲಿ ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಅವರ ಪುತ್ರ ಪ್ರತೀಕ್‌ನ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ವರ್ಷದ ಹಿಂದೆ ಪ್ರತೀಕ್ ಇನ್ಸ್ಟಾಗ್ರಾಮ್ ನಲ್ಲಿ ನನಗೆ ಪರಿಚಯವಾಗಿದ್ದ. ನಂತರ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಬೆಂಗಳೂರಿಗೆ ಕರೆಸಿಕೊಂಡಿದ್ದ. ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಬೆದರಿಸಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಇದಾದ ನಂತರ ಪ್ರತೀಕ್ ಮತ್ತು ಅವರ ಮನೆಯವರು ನಮ್ಮ ಮನೆಗೆ ಬಂದು ಮದುವೆ ಮಾಡುವುದಾಗಿ ಹೇಳಿದ್ದರು. 2023ರಲ್ಲಿ ನಮ್ಮಿಬ್ಬರ ನಿಶ್ಚಿತಾರ್ಥವಾಗಿತ್ತು. 2024ರ ಮೇ ತಿಂಗಳಲ್ಲಿ ಮದುವೆಯಾಗುವ ಎಂದು ಹೇಳಿದ್ದೆ. ಆದರೆ ಪ್ರತೀಕ್, ಲೋಕಸಭಾ ಚುನಾವಣೆ, ಮಳೆಗಾಲದ ನೆಪದಲ್ಲಿ ವಿವಾಹ ಮುಂದೂಡಿದ್ದ. ಈ ಮಧ್ಯೆ ಮಹಾರಾಷ್ಟ್ರದ ಲಾತುರ್ ಮತ್ತು ಶಿರಡಿಗೆ ಕರೆದೊಯ್ದು ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.
ಇದಾದ ನಂತರ ಮದುವೆಯ ಕುರಿತು ಮಾತನಾಡಲು ನಮ್ಮ ಮನೆಯವರು ಪ್ರತೀಕ್ ಅವರ ಮನೆಗೆ ಹೋಗಿದ್ದರು. ಈ ವೇಳೆ ಶಾಸಕ ಪ್ರಭು ಚೌವ್ಹಾಣ್ ಅವರು ನನ್ನ ಮಗನ ಜೊತೆ ನಿಮ್ಮ ಮಗಳನ್ನು ಮದುವೆ ಮಾಡುವುದಿಲ್ಲ ಎಂದು ಗಲಾಟೆ ಮಾಡಿ ಕಳುಹಿಸಿದ್ದಾರೆ. ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಪ್ರತೀಕ್ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಸಂತ್ರಸ್ತೆ ದೂರಿನಲ್ಲಿ ಆಗ್ರಹಿಸಿದ್ದಾರೆ.