ಶಾಸಕ ಪ್ರಭು ಚೌವ್ಹಾಣ್ ಅವರ ಪುತ್ರನ ಬಂಧನವಾಗುತ್ತಿಲ್ಲ, ಸಿಎಂ ನಮ್ಮ ಜೊತೆ ಚರ್ಚೆ ಮಾಡಲಿ: ಸಂತ್ರಸ್ತೆ
ಬೀದರ್ : ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ಮೋಸ ಮಾಡಿದ ಪ್ರತೀಕ್ ನನ್ನು ಪೊಲೀಸರು ಬಂಧಿಸುತ್ತಿಲ್ಲ. ಅವನು ಶಾಸಕರ ಮಗನಾಗಿದ್ದಾನೆ ಎನ್ನುವ ಕಾರಣಕ್ಕೆ ಬಂಧನವಾಗುತ್ತಿಲ್ಲ ಅನಿಸುತ್ತಿದೆ. ಹಾಗಾಗಿ ಕರ್ನಾಟಕದ ಮುಖ್ಯಮಂತ್ರಿಗಳು ನಮ್ಮನ್ನು ಕರೆದು ಇದರ ಬಗ್ಗೆ ಚರ್ಚೆ ಮಾಡಲಿ ಎಂದು ಸಂತ್ರಸ್ತೆಯು ಮನವಿ ಮಾಡಿದ್ದಾರೆ.
ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಅವರ ಮಗ ಪ್ರತೀಕ್ ಮಹಾರಾಷ್ಟ್ರ ಮೂಲದ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಂತ್ರಸ್ತೆ ಯುವತಿಯು ಸುದ್ಧಿಗಾರರ ಜೊತೆ ಮಾತನಾಡುತ್ತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರಕರಣ ದಾಖಲಾಗಿ ಹಲವು ದಿನಗಳು ಕಳೆದರೂ ಪ್ರತೀಕ್ ನ ಬಂಧನವಾಗಿಲ್ಲ. ನಾವು ಪ್ರಕರಣ ದಾಖಲು ಮಾಡಿದ ನಂತರ ನಮ್ಮ ಕುಟುಂಬಸ್ಥರ ಮೇಲೂ ಕೂಡ ಪ್ರಕರಣ ದಾಖಲು ಮಾಡಿದ್ದಾರೆ. ಅವರು ಶ್ರೀಮಂತರಾಗಿದ್ದರಿಂದ ಅವರ ಬಂಧನವಾಗುತ್ತಿಲ್ಲ. ನಾವು ಬಡವರಿದ್ದ ಕಾರಣ ನಮ್ಮನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.