ಹುಲಸೂರು: ತಾಲೂಕಿನ ಮುಚಳಂಬ ಗ್ರಾಮದ ಸರ್ವೆ ನಂ. 410ಕ್ಕೆ ಸಂಬಂಧಿಸಿದ ಸರ್ಕಾರಿ ಜಮೀನಿನ ಅಳತೆ ಹಾಗೂ ಸರ್ವೇ ಕಾರ್ಯದಲ್ಲಿ ಲೋಪವಾಗಿದ್ದು, ಭೂಮಾಪಕರು ಲಂಚದ ಹಣ ಸ್ವೀಕರಿಸಿರುವ ಬಗ್ಗೆ ಅನುಮಾನವಿದೆ ಎಂದು ಆರೋಪಿಸಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಮುಚಳಂಬ ಗ್ರಾಮಸ್ಥರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಈ ಕುರಿತು ಬುಧವಾರ ಹುಲಸೂರು ತಹಸೀಲ್ದಾರ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಸರ್ಕಾರಿ ಜಮೀನಿನ ಅಳತೆ ಹಾಗೂ ಸರ್ವೇ ಕಾರ್ಯ ಕೈಗೊಳ್ಳುವ ಸಂದರ್ಭದಲ್ಲಿ ಸಂಬಂಧಪಟ್ಟ ಭೂಮಾಪಕರನ್ನು ಸಂಪರ್ಕಿಸಲಾಗಿತ್ತು. ಈ ವೇಳೆ ಲಂಚದ ಹಣ ಸ್ವೀಕರಿಸಿರುವ ಬಗ್ಗೆ ಅನುಮಾನ ಉಂಟಾಗಿದೆ ಎಂದು ದೂರಲಾಗಿದೆ.

ಜಮೀನಿನ ಅಳತೆ ಹಾಗೂ ಸರ್ವೇ ಕಾರ್ಯವನ್ನು ನಿಯಮಾನುಸಾರ, ನಿಷ್ಪಕ್ಷಪಾತವಾಗಿ ಹಾಗೂ ಸರ್ಕಾರಿ ದಾಖಲೆಗಳಿಗೆ ಅನುಗುಣವಾಗಿ ನಡೆಸಲಾಗಿದೆಯೇ ಎಂಬ ಬಗ್ಗೆಯೂ ಅನುಮಾನವಿದೆ. ಅಳತೆ ಸಂದರ್ಭದಲ್ಲಿ ಸ್ಥಳ ಪರಿಶೀಲನೆ, ಗಡಿ ಗುರುತಿಸುವಿಕೆ, ಕಂದಾಯ ಹಾಗೂ ಸರ್ವೇ ದಾಖಲೆಗಳು ಮತ್ತು ವಾಸ್ತವಿಕ ಸ್ಥಳ ಪರಿಸ್ಥಿತಿಗಳನ್ನು ಸಮರ್ಪಕವಾಗಿ ಪರಿಗಣಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸರ್ಕಾರಿ ಜಮೀನಿನ ರಕ್ಷಣೆ ಹಾಗೂ ಕಂದಾಯ ದಾಖಲೆಗಳ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿ, ಸ್ಥಳ ಪರಿಶೀಲನೆ ನಡೆಸಿ ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕು. ಲೋಪ ಅಥವಾ ಅಕ್ರಮ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಚಳಂಬ ಗ್ರಾಮಸ್ಥರಾದ ಸಂದೀಪ್ ಮುಕಿಂದೆ, ವಿಷ್ಣು ಶೃಂಗಾರೆ, ರಾಹುಲ್ ಮದಾಳೆ, ದಿನೇಶ್ ಭಾಡ್ಸಿಂಗೆ, ರಾಜಕುಮಾರ್ ರೈಪಲ್ಲೆ, ಅತಿಷ್ ಗುಪ್ತ, ಕಾರ್ತಿಕ್ ಕರಬಂದೆ, ಸುಜಿತ್ ಶೃಂಗಾರೆ, ನಾಗೇಶ್ ಮದಾಳೆ, ಮೋಹನ್ ಕುರ್ನೆ ಹಾಗೂ ವಿಶಾಲ ಶೃಂಗಾರೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor