ಬೀದರ್: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಡಿ ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಹಾಗೂ ಫಲಾನುಭವಿಗಳಿಗೆ ವಿತರಿಸಬೇಕಾದ ಸಾಮಗ್ರಿಗಳ ದುರುಪಯೋಗದ ಕುರಿತು ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಬುಧವಾರ ಸಲ್ಲಿಸಿದ ಮನವಿಯಲ್ಲಿ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದಂತೆ 2018-19ನೇ ಸಾಲಿನಲ್ಲಿ ಫಲಾನುಭವಿಗಳಿಗೆ ನೀಡಬೇಕಿದ್ದ ಹೊಲಿಗೆ ಯಂತ್ರಗಳು, ಜಮಖಾನೆಗಳು, ಪುಸ್ತಕಗಳು, ಬೋರ್ಡ್‌ಗಳು ಹಾಗೂ ದಿನಚರಿ ಪುಸ್ತಕಗಳು ಸೇರಿದಂತೆ ವಿವಿಧ ಸಾಮಗ್ರಿಗಳು ಅರ್ಹ ಫಲಾನುಭವಿಗಳಿಗೆ ತಲುಪದೆ ಬೇರೆ ರೀತಿಯಲ್ಲಿ ಬಳಕೆಯಾಗಿವೆ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಸಾಮಗ್ರಿಗಳ ಖರೀದಿ ಹಾಗೂ ವಿತರಣೆಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ.

ಅದೇ ರೀತಿ, ಯಾದಗಿರಿ ಜಿಲ್ಲೆಯ ಸುರಪುರ, ಯಾದಗಿರಿ, ಶಹಾಪುರ ಹಾಗೂ ಬೀದರ್ ಜಿಲ್ಲೆಯ ಹುಮನಾಬಾದ್ ಜೈಲುಗಳಲ್ಲಿ ವಿತರಿಸಲಾದ ಪುಸ್ತಕಗಳ ಮೂಲ, ಖರೀದಿ ಬಿಲ್, ವಿತರಣೆ ದಾಖಲೆ ಹಾಗೂ ಪುಸ್ತಕಗಳ ಮೇಲಿರುವ ಗುರುತು (ಸ್ಟಿಕ್ಕರ್)ಗಳನ್ನೂ ಪರಿಶೀಲಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂಬಂಧಪಟ್ಟ ಅಧಿಕಾರಿಗಳು, ಸಂಸ್ಥೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದವರಿಂದ ಮಾಹಿತಿ ಪಡೆದು, ದಾಖಲೆಗಳು, ಛಾಯಾಚಿತ್ರಗಳು, ವೀಡಿಯೋಗಳು ಮತ್ತು ಪತ್ರಿಕಾ ವರದಿಗಳನ್ನು ತನಿಖೆಯ ಭಾಗವಾಗಿ ಪರಿಶೀಲಿಸಬೇಕು. ಆರೋಪಗಳು ತನಿಖೆಯಲ್ಲಿ ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪಾ, ಜಿಲ್ಲಾ ಸಹ ಕಾರ್ಯದರ್ಶಿ ಪಿಂಟು ಸಿರ್ಸಿ, ಬೀದರ್ ದಕ್ಷಿಣ ಕ್ಷೇತ್ರದ ಅಧ್ಯಕ್ಷ ನೀಲೇಶ್ ರಾಥೋಡ್, ನಗರ ಪ್ರಧಾನ ಕಾರ್ಯದರ್ಶಿ ಗಿರೀಶ್ ಓಂಕಾರೆ, ಸಾಗರ್ ಕಡ್ಯಾಳ್, ಮಾಣಿಕ್ ಭೋವಿ, ಅಭಿಷೇಕ್ ಕಮಠಾಣೆ ಹಾಗೂ ಪುನೀತ್ ಸೇರಿದಂತೆ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor