ರಾಜ್ಯದ ಪ್ರತಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ : ಛಲವಾದಿ ನಾರಾಯಣಸ್ವಾಮಿ
ಬೀದರ್ : ರಾಜ್ಯದಲ್ಲಿ ಪ್ರತಿ ಇಲಾಖೆಯಲ್ಲಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ನಗರದ ಮೈಲೂರು ಕ್ರಾಸ್ ನಲ್ಲಿರುವ ಕಾಜಿ ಕಲ್ಯಾಣ ಮಂಟಪದಿಂದ ತಾಲ್ಲೂಕು ಪಂಚಾಯತ್ ಮುತ್ತಿಗೆ ಹಾಕುವುದಕ್ಕಾಗಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಕಾಲ್ನಡಿಗೆಯಲ್ಲಿ ಬಂದು ತಾಲ್ಲೂಕು ಪಂಚಾಯತ್ ಎದುರು ಅವರು ಮಾತನಾಡಿದರು.
ರಾಜ್ಯದ ಪ್ರತಿಯೊಬ್ಬ ಮಂತ್ರಿ ಕೂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಎಲ್ಲಿ ನೋಡಿದರೂ ಕೂಡ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದರು.
ಸಿದ್ದರಾಮಯ್ಯನವರು ನಿನ್ನೆ ದೆಹಲಿಗೆ ಹೋಗಿದ್ದರು. ಪ್ರಧಾನಮಂತ್ರಿ ಅವರನ್ನು ಒಂದು ಸಲ ಭೇಟಿ ಮಾಡಿ ಭ್ರಷ್ಟಾಚಾರ ಇಲ್ಲದೆ ಆಡಳಿತ ನಡೆಸುವುದು ಹೇಗೆ ಎಂದು ಒಂದು ತಾಸು ಚರ್ಚೆ ಮಾಡಿ, ಟ್ಯೂಷನ್ ತಗೊಂಡು ಬರಬೇಕಾಗಿತ್ತು. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ 11 ವರ್ಷ ಆಯ್ತು. ಅದಕ್ಕಿಂತ ಮುಂಚೆ ಗುಜರಾತಿನ ಮುಖ್ಯಮಂತ್ರಿಯಾಗಿ 13 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ ಎಂದರು.
ಇವತ್ತು ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಭ್ರಷ್ಟಾಚಾರ ಮಾಡಿ ಜನರಿಂದ ಛಿಮಾರಿ ಹಾಕಿಸಿಕೊಳ್ಳುವ ಪರಿಸ್ಥಿತಿ ರಾಜ್ಯ ಸರಕಾರಕ್ಕೆ ಬಂದಿದೆ. ನಮ್ಮ ಹೋರಾಟ ಇಡೀ ರಾಜ್ಯದಲ್ಲಿ ಇದೇ ರೀತಿಯಲ್ಲಿ ನಡೆಯುತ್ತದೆ. ನೀವು ರಾಜೀನಾಮೆ ನೀಡುವವರೆಗೂ ನಾವು ವಿರಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯರಾದ ಎಂ.ಜಿ.ಮೂಳೆ, ರಘುನಾಥ್ ಮಲ್ಕಾಪುರೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಹಾಗೂ ಬಾಬು ವಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.