ಷೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ ಸೈಬರ್ ವಂಚನೆ | 2.98 ಕೋಟಿ ರೂ.ಗೂ ಹೆಚ್ಚಿನ ಹಣ ಕಳೆದುಕೊಂಡ ಬೀದರ್ ಮೂಲದ ಆಫ್ರಿಕಾದ ಉದ್ಯೋಗಿ
ಬೀದರ್ : ಆಫ್ರಿಕಾದ ಕಾಂಗೋದಲ್ಲಿ ಉದ್ಯೋಗಿಯಾಗಿರುವ ಬೀದರ್ ಮೂಲದ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು 2,98,60,000 ರೂ. ವಂಚಿಸಿರುವ ಘಟನೆ ನಡೆದಿದೆ.
ವಂಚನೆಗೊಳಗಾದವರನ್ನು ನಗರದ ಶಿವನಗರ ಉತ್ತರದ ನಿವಾಸಿ ರಘುವೀರ್ ಎಂದು ಗುರುತಿಸಲಾಗಿದೆ.
ರಘುವೀರ್ ಆಫ್ರಿಕಾದ ಕಾಂಗೋದಲ್ಲಿ ಉದ್ಯೋಗಿಯಾಗಿದ್ದು, ಮಾರ್ಚ್ ತಿಂಗಳಲ್ಲಿ ಒಂದು ಫೇಸ್‌ಬುಕ್ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಅವರಿಗೆ ವಾಟ್ಸ್‌ಆ್ಯಪ್ ಗ್ರೂಪೊಂದರ ಮೆಸೇಜ್ ಬಂದಿರುತ್ತದೆ. ನಂತರ ಅಪರಿಚಿತೆ ಯೊಬ್ಬಳು ಅವರ ನಂಬರ್ ಗೆ ಕರೆ ಮಾಡಿ ಟ್ರೇಡಿಂಗ್ ಮಾಡಿ ಹಣಗಳಿಸುವ ಬಗ್ಗೆ ವಿವರಿಸಿ, ಷೇರು ಖರೀದಿ ಮಾಡಿದರೆ ಮಾರನೇ ದಿನ ಅದಕ್ಕೆ ಶೇ.5 ರಷ್ಟು ಷೇರು ಮೌಲ್ಯ ಹೆಚ್ಚಾಗುತ್ತದೆ ಎಂದು ಆಮಿಷವೊಡ್ಡಿದ್ದಳು ಎನ್ನಲಾಗಿದೆ.
ಹೀಗೆ ಹಲವು ದಿನಗಳು ಶೇ.5 ರಷ್ಟು ಲಾಭ ಪಡೆದ ಇವರಿಗೆ ಕೆಲ ದಿನಗಳ ನಂತರ Large security transaction (LST) ಯಲ್ಲಿ ವಿಐಪಿ ಮೆಂಬರ್ ಶಿಪ್ ಮಾಡಿದರೆ ಶೇ.20 ರಷ್ಟು ಲಾಭ ಪಡೆಯಬಹುದು ಎಂದು ಆಸೆ ತೋರಿಸಿದ್ದರು. 2 ಕೋಟಿ ರೂ. ಜಮೆ ಮಾಡಿದರೆ ನೀವು ಕೂಡ ವಿಐಪಿ ಆಗಬಹುದು ಎಂದು ರಘುವೀರ್ ಅವರನ್ನು ನಂಬಿಸಲಾಗಿತ್ತು.
ಇದನ್ನು ನಂಬಿ ಹೆಚ್ಚಿನ ಹಣಗಳಿಸುವ ಆಸೆಯಿಂದ ಒಟ್ಟು 2,98,60,000 ರೂ. ಗಳನ್ನು ರಘುವೀರ್ ಅವರು ಹಾಕಿದ್ದರು. ಆದರೆ ಹೂಡಿಕೆ ಮಾಡಿದ ಹಣವನ್ನು ವಾಪಾಸ್ ನೀಡದೇ ವಂಚಿಸಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಘುವೀರ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ನಗರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.