×
Ad

ಬೀದರ್ | ನಕಲಿ ವೈದರಿಗೆ ದಂಡ ವಿಧಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

Update: 2025-06-19 20:10 IST

ಬೀದರ್ : ಔರಾದ್(ಬಿ) ತಾಲೂಕಿನ ಮುಧೋಳ್ (ಬಿ) ಗ್ರಾಮದಲ್ಲಿ ನಕಲಿ ವೈದ್ಯರಾದ ನಾರಾಯಣರಾವ್‌ ಕುಲಕರ್ಣಿ ಮತ್ತು ಬಸವರಾಜ್ ಒಂಟೆ ಅವರಿಗೆ ತಲಾ 50 ಸಾವಿರ ರೂ. ಹಾಗೂ ಸ್ಟಾಫ್ ನರ್ಸ್ ಪ್ರೇಮ್ ಜಿ ಅವರಿಗೂ 1 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಆದೇಶ ಹೊರಡಿಸಿದ್ದಾರೆ. ಹಾಗೆಯೇ ಇವರು ಮುಂದೆ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ನೋಂದಣಿ ಮತ್ತು ಕುಂದು ಕೂರತೆ ಪರಿಹಾರ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಆರ್ಯುವೇದ ವೈದ್ಯ ಡಾ.ರಂಜಿತ ಬಿರಾದರ್ ಅವರಿಗೆ ಕರ್ನಾಟಕ ಆರ್ಯುವೇದ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿ, ಮಂಡಳಿಯಿಂದ ಪ್ರಮಾಣ ಪತ್ರ ಪಡೆದು ಕೆಪಿಎಂಇ ನೋಂದಣಿ ಮಾಡಿಸಿ ಅದೇ ಪದ್ದತಿಯಲ್ಲಿ ವೈದ್ಯ ವೃತ್ತಿ ನಡೆಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಔರಾದ್ (ಬಿ) ತಾಲೂಕಿನ ಮುಧೋಳ್ (ಬಿ) ಗ್ರಾಮದಲ್ಲಿ ನಾರಾಯಣರಾವ್ ಕುಲಕರ್ಣಿ, ಬಸವರಾಜ್ ಒಂಟೆ ಹಾಗೂ ಸ್ಟಾಫ್ ನರ್ಸ್ ಪ್ರೇಮ್ ಜಿ ಯಾವುದೇ ವೈದ್ಯಕೀಯ ಪದವಿ ಪಡೆಯದೆ ಚಿಕಿತ್ಸಾಲಯ ನಡೆಸುತ್ತಿದ್ದಾರೆ ಎಂದು ದೂರು ಬಂದಿದೆ. ತಾಲೂಕು ಆರೋಗ್ಯ ಅಧಿಕಾರಿ ಡಾ.ಗಾಯತ್ರಿ ಹಾಗೂ ಜಿಲ್ಲಾ ಕೆಪಿಎಮ್ಇ ನೋಡಲ್ ಅಧಿಕಾರಿ ಡಾ.ದಿಲೀಪ್ ಡೋಂಗ್ರೆ ಅವರು ಸ್ಥಳಕ್ಕೆ ಭೇಟಿ ನೀಡಿ ಕ್ಲಿನಿಕ್‌ಗಳನ್ನು ಸೀಝ್‌ ಮಾಡಿದ್ದಾರೆ ಎಂದು ತಿಳಿಸಿದರು.

ಔರಾದ್ ತಾಲೂಕಿನ ಎಕಂಬಾ ಗ್ರಾಮದಲ್ಲಿ ಡಾ.ರಂಜಿತ್ ಬಿರಾದಾರ್ ಅವರು ಮಹಾರಾಷ್ಟ್ರ ರಾಜ್ಯದಿಂದ ಆರ್ಯುವೇದ ಪದ್ದತಿಯಲ್ಲಿ ಪದವಿ ಹೊಂದಿದ್ದು ಇಲ್ಲಿ ಅಲೋಪತಿ ವೈದ್ಯ ವೃತ್ತಿ ನಡೆಸುತ್ತಿದ್ದಾರೆ. ಆದರೆ, ಕರ್ನಾಟಕ ರಾಜ್ಯದಲ್ಲಿ ವೈದ್ಯ ವೃತ್ತಿ ನಡೆಸಬೇಕಾದರೆ ಕೆಪಿಎಂಇ ಕಾಯ್ದೆ ಪ್ರಕಾರ ಕರ್ನಾಟಕ ಆರ್ಯುವೇದ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸುವ ಮೂಲಕ ಪ್ರಮಾಣ ಪತ್ರ ಪಡೆದು ಕೆಪಿಎಂಇ ನೋಂದಣಿ ಮಾಡಿಸಿ ಅದೇ ಪದ್ದತಿಯಲ್ಲಿ ವೈದ್ಯ ವೃತ್ತಿ ನಡೆಸಬೇಕಾಗಿದೆ. ಇದು ಕೆಪಿಎಂಇ ಕಾಯ್ದೆ 2007 ಕಲಂ 19 ಮತ್ತು 22ರ ಸ್ಪಷ್ಟ ಉಲ್ಲಂಘನೆ ಆಗಿರುವುದರಿಂದ ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ್ ನಿರಗುಡೆ, ಜಿಲ್ಲಾ ಕೆಪಿಎಂಇ ನೋಡಲ್‌ ಅಧಿಕಾರಿ ಡಾ.ದಿಲೀಪ್ ಡೋಂಗ್ರೆ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಗಾಯತ್ರಿ, ಡಾ.ಸಂಗಾರೆಡ್ಡಿ, ಡಾ.ಶಿವಕುಮಾರ್ ಸಿದ್ದೇಶ್ವರ್ ಹಾಗೂ ಡಾ.ರವಿ ಕಲಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News