ಪಾಳು ಬಿದ್ದು ಶಿಥಿಲಾವಸ್ಥೆಗೆ ತಲುಪಿದ ಸರಕಾರಿ ಕಟ್ಟಡ : ಸ್ವಂತ ಕಟ್ಟಡವಿದ್ದರೂ ಬಾಡಿಗೆ ಕೊಠಡಿಯಲ್ಲಿ ಶಿಕ್ಷಣ
ಬೀದರ್ : ಭಾಲ್ಕಿ ತಾಲೂಕಿನ ಬಾಜೋಳಗಾ(ಕೆ) ಗ್ರಾಮದಲ್ಲಿ ಸರಕಾರಿ ಶಾಲೆಯ ಕಟ್ಟಡವಿದ್ದರೂ ಶಿಕ್ಷಕರು ತಮ್ಮ ಸ್ವಂತ ಹಣದಿಂದ ಬಾಡಿಗೆಗೆ ಪಡೆದಿರುವ ಚಿಕ್ಕ ಕೋಣೆಯೊಂದರಲ್ಲಿ 1ರಿಂದ 5ನೇ ತರಗತಿಯವರೆಗೆ ಸರಕಾರಿ ಶಾಲೆ ನಡೆಸುತ್ತಿದ್ದಾರೆ.
ಇದು ಆಶ್ಚರ್ಯವೆನಿಸಿದರೂ ಸತ್ಯ. ಕಾರಣವೇನೆಂದರೆ, ಆ ಸರಕಾರಿ ಶಾಲೆಯ ಕಟ್ಟಡದ ಹತ್ತಿರವೇ ಭಾಲ್ಕೆಶ್ವರ್ ಶುಗರ್ ಲಿಮಿಟೆಡ್ ಎನ್ನುವ ಬೃಹತ್ ಗಾತ್ರದ ಸಕ್ಕರೆ ಕಾರ್ಖಾನೆಯೊಂದು ತಲೆ ಎತ್ತಿದೆ. ಈ ಕಾರ್ಖಾನೆಯಿಂದ ಬರುತ್ತಿರುವ ಕಲುಷಿತ ನೀರಿನ ಗಬ್ಬು ವಾಸನೆಯಿಂದ ವಿದ್ಯಾರ್ಥಿ ಹಾಗೂ ಶಿಕ್ಷಕರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿತ್ತು. ಇದಲ್ಲದೇ ಆ ಕಾರ್ಖಾನೆಯಲ್ಲಿರುವ ಕಬ್ಬಿನ ಚೂರು ತುಂಬಿರುವ ಧೂಳು ಗಾಳಿಯಲ್ಲಿ ಹಾರಿ ಬಂದು ವಿದ್ಯಾರ್ಥಿ ಮತ್ತು ಶಿಕ್ಷಕರ ಕಣ್ಣಲ್ಲಿ ಬಿದ್ದು ಕಣ್ಣು ಕಳೆದುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ವಿದ್ಯಾರ್ಥಿ ಮತ್ತು ಶಿಕ್ಷಕರ ಆರೋಗ್ಯ ಹದಗೆಡುತ್ತಿತ್ತು.
ಈ ಕಾರಣಗಳಲ್ಲದೇ ಈ ಕಾರ್ಖಾನೆಯಿಂದ ಇನ್ನು ಹಲವಾರು ತೊಂದರೆಗಳು ಆಗುತಿತ್ತು ಎಂದು ಪೋಷಕರು ಹೇಳುತ್ತಾರೆ. ಇದರಿಂದಾಗಿ ಸರಕಾರಿ ಶಾಲಾ ಕಟ್ಟಡವಿದ್ದರೂ ಕೂಡ 4-5 ವರ್ಷ ಹಿಂದಿನಿಂದ ಶಿಕ್ಷಕರು ತಮ್ಮ ಸ್ವಂತ ಹಣದಿಂದ ಒಂದು ಚಿಕ್ಕ ಕೋಣೆ ಬಾಡಿಗೆಗೆ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಸರಕಾರಿ ಶಾಲೆಯ ಕಟ್ಟಡ, ಅಡುಗೆ ಕೋಣೆ, ಶೌಚಾಲಯ ಎಲ್ಲ ವ್ಯವಸ್ಥೆ ಇದ್ದರೂ ಇವಾಗ ಅದು ಉಪಯೋಗವಿಲ್ಲದೆ ಪಾಳು ಬೀಳುವ ಪರಿಸ್ಥಿತಿಗೆ ತಲುಪಿದೆ.
ಈ ಶಾಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿವರೆಗೆ ಒಟ್ಟು 25 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಬಾಡಿಗೆ ಕೋಣೆ ಅತೀ ಚಿಕ್ಕದಾಗಿದ್ದರಿಂದ ಮಕ್ಕಳು ಒಬ್ಬರ ಮೇಲೆ ಒಬ್ಬರು ಕಾಲು ಹಾಕಿ ಕುಳಿತು ಪಾಠ ಕೇಳಬೇಕಾಗಿದೆ. ಇಲ್ಲಿ ಇಬ್ಬರು ಶಿಕ್ಷಕರಿದ್ದು ಅವರಿಗೂ ಕುಳಿತುಕೊಳ್ಳಲು ಸ್ಥಳ ಇಲ್ಲ. ಹಾಗಾಗಿ ಈ ಕೋಣೆಯ ಹತ್ತಿರವಿರುವ ಒಂದು ಮಂದಿರವೇ ಇವರಿಗೆ ಆಸರೆಯಾಗಿದೆ. ಈ ಬಾಡಿಗೆ ಕೋಣೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ಕಪ್ಪು ಹಲಗೆಯೂ ಇಲ್ಲ. ವಿದ್ಯಾರ್ಥಿಗಳ ದಾಖಲಾತಿಗಳು ಇರಿಸಲು ಕಪಾಟಿನ ವ್ಯವಸ್ಥೆ ಕೂಡ ಇಲ್ಲ.
ಈ ಬಾಡಿಗೆ ಶಾಲೆ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಬಿಸಿಯೂಟ ಕೋಣೆ ಹಾಗೆಯೇ ಇನ್ನು ಹಲವಾರು ರೀತಿಯ ಮೂಲಸೌಕರ್ಯದಿಂದ ಸಂಪೂರ್ಣವಾಗಿ ವಂಚಿತವಾಗಿದೆ. ಶೌಚಾಲಯಗೋಸ್ಕರ ನಾವು ಮನೆಗೆ ಓಡಬೇಕು ಎಂದು ಅಲ್ಲಿನ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಬಿಸಿಯೂಟಕ್ಕಾಗಿ ಬೇರೆ ಶಾಲೆ: ಬಿಸಿಯೂಟ ಮಾಡುವುದಕ್ಕೋಸ್ಕರ ವಿದ್ಯಾರ್ಥಿಗಳು ಮುಖ್ಯ ರಸ್ತೆ ದಾಟಿಕೊಂಡು ಪಕ್ಕದಲ್ಲಿರುವ ಬುದ್ಧ ಪ್ರಿಯಾ ಪ್ರೌಢ ಶಾಲೆಗೆ ಹೋಗಬೇಕು. ರಸ್ತೆ ಮೇಲೆ ಬಹಳಷ್ಟು ಕಬ್ಬಿನ ಲಾರಿ, ಟ್ರ್ಯಾಕ್ಟರ್ ಓಡಾಡುವುದರಿಂದ ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು? ಎಂದು ಪೋಷಕರು ಕೇಳುತ್ತಿದ್ದಾರೆ.
ನಾವು 2-3 ಬಾರಿ ಕ್ಷೇತ್ರ ಶಿಕ್ಷಣ ಅಧಿಕಾರಿಗೆ ಮನವಿ ನೀಡಿದ್ದೇವೆ. ಇದನ್ನು ಮೇಲಾಧಿಕಾರಿ ಗಮನಕ್ಕೆ ತರುತ್ತೇವೆ ಎಂದು ಅವರು ಹೇಳಿದ್ದರು. ಆದರೆ ಅವರು ಇತ್ತ ಗಮನ ಹರಿಸಲಿಲ್ಲ. ಇಲ್ಲಿ ಯಾವುದೇ ರೀತಿಯ ಬದಲಾವಣೆ ಆಗಲಿಲ್ಲ. ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಹಾಳಾಗಬಾರದು ಎಂದು ನಮ್ಮ ಕೈಯಿಂದಲೇ ಈ ಕೋಣೆಗೆ ಬಾಡಿಗೆ ನೀಡುತ್ತಿದ್ದೇವೆ.
- ವೆಂಕಟರಾವ್, ಮುಖ್ಯ ಶಿಕ್ಷಕ
ಸರಕಾರಿ ಶಾಲೆಯ ಕಟ್ಟಡವಿದೆ. ಆದರೆ ಅಲ್ಲಿ ಕೊಳೆತ ನೀರು ಹಾಗೂ ಧೂಳು ಬರುವುದರಿಂದ ಶಿಕ್ಷಕರು ಬಾಡಿಗೆ ಕೋಣೆಯಲ್ಲಿ ಪಾಠ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಹಲವಾರು ತೊಂದರೆಗಳಿರುವುದರಿಂದ ನಮ್ಮ ಮಕ್ಕಳು ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡುತ್ತಿದ್ದಾರೆ. ನಾವು ಬಡವರಾಗಿದ್ದರಿಂದ ನಮ್ಮ ಮಕ್ಕಳಿಗೆ ಖಾಸಗಿ ಶಾಲೆಗೆ ಸೇರಿಸುವುದಕ್ಕೆ ನಮ್ಮಿಂದ ಸಾಧ್ಯವಿಲ್ಲ. ಸರಕಾರ ಇತ್ತ ಗಮನ ಹರಿಸಿ ಶಾಲೆ ಕಟ್ಟಡ ನಿರ್ಮಾಣ ಮಾಡಿ ಕೊಡಬೇಕು.
- ಸಾರಿಕಾ, ಪೋಷಕಿ.