×
Ad

ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಐದನೇ ದಿನವೂ ಮುಂದುವರಿದ ರೈತರ ಪ್ರತಿಭಟನೆ

Update: 2025-10-16 23:02 IST

ಬೀದರ್ : ವಿವಿಧ ಬೇಡಿಕೆಗಳು ಈಡೇರಿಸಲು ರೈತ ಮತ್ತು ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಅ. 12 ರಂದು ಪ್ರಾರಂಭವಾದ ಧರಣಿ ಸತ್ಯಾಗ್ರಹವು ಐದನೇ ದಿನವಾದ ಇಂದು ಕೂಡ ಮುಂದುವರೆದಿದೆ.

ಇಂದು ರೈತ ಮತ್ತು ಕಾರ್ಮಿಕ ಸಂಘಟನೆಗಳಿಗೆ ಕನ್ನಡ ಪರ ಸಂಘಟನೆ ಮತ್ತು ಅಂಗನವಾಡಿ ಕಾರ್ಯಕರ್ತರ ಸಂಘಟನೆಗಳು ಸೇರಿದಂತೆ ಇತರರು ಬೆಂಬಲ ನೀಡಿದ್ದವು. ಎಲ್ಲ ಸಂಘಟನೆಗಳ ಒಕ್ಕೂಟದಿಂದ ಅಂಬೇಡ್ಕರ್ ವೃತ್ತ, ಭಗತ್ ಸಿಂಗ್ ವೃತ್ತ ಮತ್ತು ಶಿವಾಜಿ ವೃತ್ತದ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಕೊನೆಯಲ್ಲಿ ಅಂಬೇಡ್ಕರ್ ವೃತ್ತದಲ್ಲಿರುವ ಫುಟ್ ಪಾತ್ ಮೇಲೆ ಟೆಂಟ್ ಹಾಕಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.

ಸರ್ಕಾರ ರೈತರನ್ನು ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ. ದಸರಾ ಹಬ್ಬಕ್ಕೆ ಪರಿಹಾರ ಹಣ ಬಿಡುಗಡೆ ಮಾಡಬಹುದು ಎಂದು ಕಾದೆವು. ಆದರೆ ನಮ್ಮ ಭರವಸೆ ಹುಸಿಯಾಯಿತು. ಇವಾಗ ದೀಪಾವಳಿ ಹಬ್ಬ ಬಂದಿದೆ. ಇವಾಗಲು ಪರಿಹಾರ ಹಣದ ಭರವಸೆ ಇಲ್ಲ. ನಾವೆಲ್ಲ ರೈತರು ದೀಪಾವಳಿ ಹಬ್ಬವನ್ನು ಈ ರಸ್ತೆ ಮೇಲೆಯೇ ಆಚರಣೆ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಸ್ವಾಮಿ ಅವರು ಬೇಸರ ವ್ಯಕ್ತಪಡಿಸುತ್ತಾ ಹೇಳಿದರು.

ಬೀದರ್ ಜಿಲ್ಲೆಯನ್ನು ಹಸಿ ಬರಗಾಲ ಎಂದು ಘೋಷಣೆ ಮಾಡಿ ಪ್ರತಿ ಎಕರೆ ಭೂಮಿಗೆ 30 ಸಾವಿರ ರೂ. ಹಾಗೂ ಪ್ರತಿ ಹೇಕ್ಟರ್ ಭೂಮಿಗೆ 60 ಸಾವಿರ ರೂ. ಪರಿಹಾರ ನೀಡಬೇಕು. ರೈತರ ಎಲ್ಲ ತರಹದ ಸಾಲ ಮನ್ನಾ ಮಾಡಬೇಕು. 60 ವರ್ಷ ಪೂರೈಸಿದ ರೈತರಿಗೆ ಪ್ರತಿ ತಿಂಗಳು 10 ಸಾವಿರ ರೂ. ಗೌರವ ಧನ ನಿಗದಿಪಡಿಸಬೇಕು. ಬಿ ಎಸ್ ಎಸ್ ಕೆ ಸಕ್ಕರೆ ಕಾರ್ಖಾನೆ ಪುನರ್ ಸ್ಥಾಪನೆ ಮಾಡಿ, ಕಾರ್ಖಾನೆ ನೌಕರರ ಬಾಕಿ ಇರುವ ಸಂಬಳ ಬಿಡುಗಡೆ ಮಾಡಬೇಕು. ಹಾಗೆಯೇ ಕಾರ್ಖಾನೆಯಿಂದ ನಿವೃತ್ತಿ ಹೊಂದಿದ ನೌಕರರ 38 ಕೋಟಿ ರೂ. ಉಪದಾನ ಹಣ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಎಂ ಎಸ್ ಪಿ ಕುರಿತು ಕಾನೂನು ಅಂಗಿಕರಿಸಬೇಕು. ಹಾನಿಯಾದ ಬೆಳೆಗೆ ವಿಮಾ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕು. ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂ. ಬೆಲೆ ನಿಗದಿ ಮಾಡಬೇಕು. ಎನ್ ಎಸ್ ಎಸ್ ಕೆ ವಿರುದ್ಧ ತಂದಿರುವ ತಡೆಯಾಜ್ಞೆ ತೆರವುಗೊಳಿಸಿ ಚುನಾವಣೆ ಮಾಡುವ ಮೂಲಕ ಕಾರ್ಖಾನೆ ಪ್ರಾರಂಭಿಸಬೇಕು. ಹಿಂಗಾರು ಬಿತ್ತನೆಗೆ ಬಿಜ ಮತ್ತು ಗೊಬ್ಬರ ಸರ್ಕಾರವೇ ಪೂರೈಸಬೇಕು. ಪ್ರತಿ ಗ್ರಾಮಗಳಲ್ಲಿ ನರೇಗಾ ಉದ್ಯೋಗ ಖಾತ್ರಿ ಕಾಮಗಾರಿ ಪ್ರಾರಂಭ ಮಾಡಬೇಕು. ಕಾರಂಜಾ ಸಂತ್ರಸ್ತರಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.

ಸಚಿವರು ದೀಪಾವಳಿ ಹಬ್ಬದ ಒಳಗಾಗಿ ನಮ್ಮ ಸಮಸ್ಯೆಗಳು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅಲ್ಲಿವರೆಗೆ ನಮ್ಮ ಈ ಧರಣಿ ಸತ್ಯಾಗ್ರಹ ಮುಂದುವರೆಯಲಿದೆ. ಒಂದು ವೇಳೆ ಅವರು ನಮ್ಮ ಸಮಸ್ಯೆಗಳು ಬಗೆಹರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಅಲ್ಲಿದ್ದ ರೈತರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಾಬುರಾವ್ ಹೊನ್ನಾ, ನಾಗಶೆಟ್ಟೆಪ್ಪ ಲಂಜವಾಡೆ, ಕಾಶೀನಾಥ್ ಭೂರೆ, ನಜೀರ್ ಅಹ್ಮದ್, ಕೊಂಡಿಬಾರಾವ್ ಪಾಂಡ್ರೆ, ಎಂ.ಡಿ ಶಾಫಯತ್ ಅಲಿ, ಸಂತೋಷಕುಮಾರ್, ಶೀಲಾ ಸಾಗರ್, ಶಾಂತಮ್ಮ ಮೂಲಗೆ ಹಾಗೂ ಸೂರ್ಯಕಾಂತ್ ಸೇರಿದಂತೆ ಕನ್ನಡಪರ ಸಂಘಟನೆ ಮತ್ತು ಅಂಗನವಾಡಿ ಕಾರ್ಯಕರ್ತರ ಸಂಘದ ಮಹಿಳೆಯರು ಮತ್ತು ಅನೇಕ ರೈತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News