×
Ad

ಆರ್ಥಿಕ ಬೆಳವಣಿಗೆಗೆ ಕೃಷಿಯ ಜೊತೆ ಹೈನುಗಾರಿಕೆ, ಮೀನು, ಕೋಳಿ ಸಾಕಾಣಿಕೆಗೂ ಆದ್ಯತೆ ನೀಡಿ : ಈಶ್ವರ್ ಖಂಡ್ರೆ

Update: 2025-01-17 21:30 IST

ಬೀದರ್ : ಪ್ರಕೃತಿ ವಿಕೋಪ ಬದಲಾಗುತ್ತಿರುವ ಹವಾಮಾನ ವೈಪರಿತ್ಯ ಎದುರಿಸುವ ನಿಟ್ಟಿನಲ್ಲಿ ರೈತರು ಆರ್ಥಿಕವಾಗಿ ಸಬಲರಾಗಲು ಕೃಷಿಯ ಜೊತೆಯಲ್ಲಿ ಹೈನುಗಾರಿಕೆ, ಕೋಳಿ ಹಾಗೂ ಮೀನು ಸಾಕಾಣಿಕೆಗೂ ಕೂಡ ಮಹತ್ವ ನೀಡಬೇಕು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಸಲಹೆ ನೀಡಿದರು.

ಇಂದು ನಗರದ ಹೊರವಲಯದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 20ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಜಾನುವಾರು ಕುಕ್ಕುಟ ಹಾಗೂ ಮತ್ಸ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಬೀದರ್ ಜಿಲ್ಲೆಯಲ್ಲಿ ಶೇ.70 ರಷ್ಟು ಜನ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ರೈತರ ಬೆಳೆಗಳಿಗೆ ವೈಜ್ಞಾನಿಕೆ ಬೆಲೆ ಬರಬೇಕು. ಪ್ರಕೃತಿ ವಿಕೋಪದಂತಹ ಪರಿಸ್ಥಿತಿಯಲ್ಲಿ ರೈತರಿಗೆ ಸಾಕಷ್ಟು ನಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರು ಕೃಷಿ ಜೊತೆ ಸಹ ಉತ್ಪಾದನೆಗಳಾದ ಪಶು ಸಂಗೋಪನೆಗೆ ಆದ್ಯತೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಕೃಷಿ ಪೂರಕ ಸಾಕಷ್ಟು ಉತ್ತಮ ವಾತಾವರಣವಿದ್ದು, ಕಪ್ಪು, ಕೆಂಪು ಹಾಗೂ ಬಿಳಿ ಮಿಶ್ರಿತ ಮಣ್ಣು ಇದೆ. ಈ ಮಣ್ಣಲ್ಲಿ ಏನೂ ಬೇಕಾದರೂ ಬೆಳೆಯಬಹುದು. ನೈಸರ್ಗಿಕವಾಗಿ ಜಿಲ್ಲೆಯು ಸಂಪತ್ಭರಿತವಾಗಿದೆ. ಈ ಭಾಗದಲ್ಲಿ ಹೈನುಗಾರಿಕೆ, ಕೋಳಿ, ಕುರಿ ಮತ್ತು ಮೀನು ಸಾಕಾಣಿಕೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ವರ್ಣ ಸಂಚಿಕೆ ಮತ್ತು ಇತರೆ ಪ್ರಕಟಣೆಗಳ ಬಿಡುಗಡೆ ಹಾಗೂ ತಂತ್ರಜ್ಞಾನ ಆಧಾರಿತ ತಳಿ ಗುರುತಿಸುವ ಮೊಬೈಲ್ ಆ್ಯಪ್ ಲೋಕಾರ್ಪಣೆಗೊಳಿಸಿ, ರಾಜ್ಯದ 31 ಜಿಲ್ಲೆಗಳ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರೈತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಹಾರಕೂಡ ಮಠದ ಡಾ.ಚನ್ನವೀರ ಶಿವಾಚಾರ್ಯರರು, ಭಾಲ್ಕಿ ಮಠದ ಗುರುಬಸವ ಪಟ್ಟದ್ದೇವರು, ಪಶು ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯುಕ್ತರಾದ ರೂಪಾ, ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ, ವ್ಯವಸ್ಥಾಪಕ ಮಂಡಳಿ ಸದಸ್ಯರುಗಳಾದ ಲತಾ ಡಿ.ಎಚ್., ಡಾ.ವೆಂಕಟಾಚಲ ವಿ.ಎಚ್., ಡಾ.ಎಚ್.ಎಂ.ಜಯಪ್ರಕಾಶ್, ಸಂಗಪ್ಪ ದೊಡ್ಡಬಸಪ್ಪಾ ವಾಲೀಕರ್, ಬಸವರಾಜ್ ಪಿ.ಭತಮುರ್ಗೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕ ಡಾ.ಮಂಜುನಾಥ್ ಪಾಳೇಗಾರ್, ಮೀನುಗಾರಿಕೆ ಇಲಾಖೆಯ ನಿರ್ದೇಶಕ ದಿನೇಶಕುಮಾರ್ ಕಲ್ಲೇರ್, ವಿಸ್ತರಣಾ ಅಧಿಕಾರಿ ಬಸವರಾಜ್ ಅವಟಿ, ಶಾಹಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದಿರ್, ಪಶು ಹಾಗೂ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಡೀನ್ ಡಾ.ಎಂ.ಕೆ.ತಾಂದಳೆ ಹಾಗೂ ಡಾ.ಪಿ.ಟಿ.ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಉಪನಿರ್ದೇಶಕರು ಮತ್ತು ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News