×
Ad

ಖಾಸಗಿ ಶಾಲೆಗಳ ಹಾವಳಿಯಿಂದ ಸರಕಾರಿ ಶಾಲೆಗಳು ಸಮಸ್ಯೆಯಲ್ಲಿ ಸಿಲುಕಿ ನಲಗುತ್ತಿವೆ : ಶಶಿಕಾಂತ್ ಶೆಂಬೆಳ್ಳಿ

Update: 2025-06-21 13:48 IST

ಬೀದರ್ : ಆಂಗ್ಲ ಹಾಗೂ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳ ಹಾವಳಿಯಿಂದ ಅನೇಕ ಕಡೆ ಸರ್ಕಾರಿ ಶಾಲೆಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಿವೆ ಎಂದು ಹಿರಿಯ ಪತ್ರಕರ್ತ ಶಶಿಕಾಂತ್ ಶೆಂಬೆಳ್ಳಿ ಅಭಿಪ್ರಾಯಪಟ್ಟರು.

ನಗರದ ಬೆಳ್ಳೂರ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವಿರತ ಆರ್ಗನೈಶೇನ್ ವತಿಯಿಂದ ಹಮ್ಮಿಕೊಂಡ ಉಚಿತ ನೋಟ್‌ ಬುಕ್‌ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಗುಣಮಟ್ಟ ಶಿಕ್ಷಣಕ್ಕೆ ಒತ್ತು ನೀಡಬೇಕು. ಉತ್ತಮ ಶಿಕ್ಷಣ ನೀಡಿದರೆ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಸೇರಿಸಲು ಆಸಕ್ತಿ ತೋರುತ್ತಾರೆ. ಮಕ್ಕಳನ್ನು ಬಹುಮುಖಿ ಪ್ರತಿಭಾವಂತರನ್ನಾಗಿ ಮಾಡುವ ಜೊತೆಗೆ ಶಾಲೆಯಲ್ಲಿ ಕಲಿಕೆಯ ವಾತಾವರಣ ನಿರ್ಮಿಸಲು ಶಿಕ್ಷಕರು ಗುಣಮಟ್ಟ ಶಿಕ್ಷಣ, ನೈತಿಕ ಮೌಲ್ಯ ಬೋಧನೆಗೆ ಮುಂದಾಗಬೇಕು ಎಂದು ತಿಳಿಸಿದರು.

ಚಿಂತಕ ದಿಲೀಪ್ ಚಂದಾ ಅವರು ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳ ಕಲಿಕೆಗೆ ಅಗತ್ಯವಿರುವ ನೋಟ್‌ ಬುಕ್‌ ಸೇರಿದಂತೆ ಇತರ ಸಾಮಾಗ್ರಿ ವಿತರಿಸುವ ಕಾರ್ಯ ಅವಿರತ ತಂಡದಿಂದ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅವಿರತ ಆರ್ಗನೈಶೇನ್‌ ತಂಡದಿಂದ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಯೋಜನೆಯಿದೆ ಎಂದು ಹೇಳಿದರು.

ಪತ್ರಕರ್ತ ಬಾಲಾಜಿ ಕುಂಬಾರ್ ಅವರು ಮಾತನಾಡಿ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಉಳಿಸುವುದು ಇಂದು ಸವಾಲಿನ ಕೆಲಸವಾಗಿದೆ. ಶಿಕ್ಷಕ ಇಚ್ಛಾಶಕ್ತಿ, ಪೋಷಕರ ಪ್ರೋತ್ಸಾಹದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ. ಸರ್ಕಾರೇತರ ಸಂಘ-ಸಂಸ್ಥೆಗಳು, ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳ ಸಹಾಯಧನದಿಂದ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಬಹುದು. ಮಕ್ಕಳನ್ನು ಮೌಲ್ಯ ಶಿಕ್ಷಣ, ಪಠೇತ್ಯರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶ್ಯಾಮಸನ್‌, ಮುಖ್ಯ ಶಿಕ್ಷಕ ನಾಗಶೆಟ್ಟಿ ಗಾದಗೆ, ಅವಿರತ ತಂಡದ ಪ್ರವೀಣಕುಮಾರ್‌ ರತ್ನಾಕರ್,‌ ಸಮೂಹ ಸಂಪನ್ಮೂಲ ಶಿಕ್ಷಕರಾದ ಸುಲೋಚನಾ , ರಘುಶಂಖ ಭಾತಂಭ್ರಾ, ಮನೋಹರ್ ಕಾಶಿ, ಶಿಕ್ಷಕ ವಿಠ್ಠಲ್ ವರ್ಮಾ ಹಾಗೂ ಶಿಕ್ಷಕಿ ಸುಜಾತಾ ಎಸ್‌ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News