×
Ad

ಶಾಲಾ ಕಟ್ಟಡದಲ್ಲಿ ಅನಾಹುತ ಸಂಭವಿಸಿದರೆ ಅಧಿಕಾರಿಗಳೇ ಹೊಣೆ : ಸಚಿವ ಈಶ್ವರ್ ಖಂಡ್ರೆ

Update: 2025-08-29 21:34 IST

ಬೀದರ್ : ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳ ಕಟ್ಟಡದ ಸ್ಥಿತಿಗತಿಯ ಬಗ್ಗೆ ಕೂಡಲೇ ಅಧ್ಯಯನ ನಡೆಸಬೇಕು. ಸೋರುತ್ತಿರುವ ಕಟ್ಟಡಗಳನ್ನು ತಕ್ಷಣವೇ ದುರಸ್ತಿ ಮಾಡಬೇಕು. ತುರ್ತು ಕ್ರಮ ವಹಿಸದೆ ಯಾವುದೇ ಸರ್ಕಾರಿ ಶಾಲಾ ಕಟ್ಟಡದಲ್ಲಿ ಅನಾಹುತ ಸಂಭವಿಸಿದರೆ ಅದಕ್ಕೆ ಸಂಬಂಧಿತ ಬಿಇಓ ಮತ್ತು ಡಿಡಿಪಿಐಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಶಿಥಿಲವಾದ ಕಟ್ಟಡ ಕೆಡವಿ ಹೊಸ ಕಟ್ಟಡ ಕಟ್ಟಬೇಕು. ಇದಕ್ಕೆ ಹಣದ ಕೊರತೆ ಇಲ್ಲ. ಅಂಗನವಾಡಿಗೂ ಇದೇ ನಿಯಮ ಅನ್ವಯಿಸುತ್ತದೆ. ಹೊಸ ಅಂಗನವಾಡಿ ಕಟ್ಟಡಗಳ ಗುಣಮಟ್ಟದ ಪರೀಕ್ಷೆ ಮಾಡಬೇಕು. ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.

ವಿಪರೀತ ಮಳೆಯಿಂದ ಜಿಲ್ಲೆಯಲ್ಲಿ ಆಗಿರುವ ಬೆಳೆ ಹಾನಿಯ ಬಗ್ಗೆ ಕೂಡಲೇ ಸಮೀಕ್ಷೆ ನಡೆಸಿ, ರೈತರಿಗೆ ಬೆಳೆ ವಿಮೆ ಕಂಪನಿಗಳಿಂದ ಸೂಕ್ತ ಪರಿಹಾರ ದೊರಕಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಡಳಿತ ಮತ್ತು ಕೃಷಿ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಭಾರಿ ಮಳೆಯಿಂದ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದ್ದು, ಈ ಸಂಪರ್ಕಗಳ ಪುನರ್ ಸ್ಥಾಪನೆಗೆ ತಕ್ಷಣ ಕ್ರಮ ವಹಿಸಬೇಕು. ಕಾರ್ಯ ನಿರ್ವಾಹಕ ಎಂಜಿನಿಯರುಗಳು ವಾಟ್ಸ್ ಅಪ್ ನಲ್ಲಿ ಮಾಹಿತಿ ತರಿಸಿಕೊಳ್ಳುವ ಪ್ರವೃತ್ತಿ ಬಿಟ್ಟು, ತಾವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳಬೇಕು. ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಕೂಡಲೇ ಈ ಎಲ್ಲ ಗುಂಡಿಗಳನ್ನು ಸಮರೋಪಾದಿಯಲ್ಲಿ ತಾತ್ಕಾಲಿಕವಾಗಿ ಮುಚ್ಚಬೇಕು. ಮಳೆಗಾಲ ಮುಗಿದ ತರುವಾಯ ಅಕ್ಟೋಬರ್ ತಿಂಗಳಲ್ಲಿ ಶಾಶ್ವತವಾಗಿ ಈ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದರು.

ಎಸ್ ಡಿ ಆರ್ ಎಫ್ ಮತ್ತು ಎನ್ ಡಿ ಆರ್ ಎಫ್ ಅಡಿ ಎಷ್ಟು ಹಣ ಲಭ್ಯವಾಗಲಿದೆ ಎಂಬ ಬಗ್ಗೆ ಅಂದಾಜು ಮಾಡಿ, ಮಳೆಯಿಂದ ಆಗಿರುವ ಹಾನಿಗೆ ಸೂಕ್ತ ಪರಿಹಾರ ದೊರಕಿಸಬೇಕು. ನೌಬಾದ್- ಹೈದರಾಬಾದ್ ರಿಂಗ್ ರಸ್ತೆ (ಗಡಿವರೆಗೆ) ಕಾಮಗಾರಿಯನ್ನು ಚರಂಡಿಯಿಂದ ಚರಂಡಿಯವರೆಗೆ ಕೈಗೊಳ್ಳಲು ಮತ್ತು ಈ ರಸ್ತೆಯಲ್ಲಿ ಸಾರ್ವಜನಿಕ ಉಪಯೋಗಕ್ಕೆ ಸ್ಥಳ ಬಿಟ್ಟು ಎಷ್ಟು ಕಿಲೋಮೀಟರ್ ರಸ್ತೆ ಅಭಿವೃದ್ಧಿಪಡಿಸಬೇಕಾಗುತ್ತದೆ ಎಂಬು ಸಮೀಕ್ಷೆ ನಡೆಸಿ, ಕೂಡಲೇ ಕಾಮಗಾರಿ ಆರಂಭಿಸಲು ಅವರು ಸೂಚಿಸಿದರು.

ಎಲ್ಲ ಪಿಡಿಓಗಳು, ಸಬ್ ಇನ್‌ಸ್ಪೆಕ್ಟರ್ ಗಳು, ತಾಲೂಕು ಮತ್ತು ಪ್ರಾಥಮಿಕ ಆರೋಗ್ಯಾಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲೇ ರಾತ್ರಿ ವಾಸ್ತವ್ಯ ಮಾಡಬೇಕು. ಒಂದೊಮ್ಮೆ ಒಬ್ಬ ಪಿಡಿಓಗೆ ಎರಡು ಮೂರು ಗ್ರಾಮ ಪಂಚಾಯತ್‌ ಜವಾಬ್ದಾರಿ ನೀಡಿದ್ದರೆ ಹೆಚ್ಚು ಸಮಸ್ಯೆ ಇರುವ ಗ್ರಾಮದಲ್ಲಿ ಇರಬೇಕು ಎಂದ ಅವರು, ಈಗಾಗಲೇ ವರ್ಗಾವಣೆಗೊಂಡಿರುವ ಅಧಿಕಾರಿಗಳ ಜಾಗಕ್ಕೆ ನಿಯೋಜಿತರಾದ ಅಧಿಕಾರಿ ಬಂದು ಹೊಣೆ ವಹಿಸಿಕೊಳ್ಳುವವರೆಗೆ ಬಿಡುಗಡೆ ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿ, ಈ ಸಭೆಯಲ್ಲಿ ಸೂಚಿಸಿದ ಕಾರ್ಯ ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹಜ್ ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News