ಬೆಲ್ಲ ತಯಾರಿಕೆಗೆ ಆಧುನಿಕ ತಂತ್ರಜ್ಞಾನ ಅಗತ್ಯ : ಸಚಿವ ಈಶ್ವರ್ ಖಂಡ್ರೆ
ತಂತ್ರಜ್ಞಾನ ಚಿಕಿತ್ಸಾಲಯ-ಬೆಲ್ಲ ಕ್ಲಸ್ಟರ್ ಕಾರ್ಯಾಗಾರಕ್ಕೆ ಸಚಿವರಿಂದ ಚಾಲನೆ
ಬೀದರ್: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಎರಡು ದಿನಗಳ ತಂತ್ರಜ್ಞಾನ ಚಿಕಿತ್ಸಾಲಯ–ಬೆಲ್ಲ ಕ್ಲಸ್ಟರ್ ಕಾರ್ಯಾಗಾರಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿದರು.
ನಗರದ ಜನವಾಡ ರಸ್ತೆಯ ಇನಸ್ಥಿರಾ ರೆಸಾರ್ಟ್ ಮತ್ತು ಕನ್ವೆನ್ಷನ್ ಹಾಲ್‌ನಲ್ಲಿ ಇಂದು ನಡೆದ ಈ ಕಾರ್ಯಕ್ರಮವನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ತು ಸಂಯುಕ್ತಾಶ್ರಯದಲ್ಲಿ, ಕೇಂದ್ರ ಸರ್ಕಾರದ ಎಂಎಸ್‌ಎಂಇ–ರಾಂಪ್ ಯೋಜನೆಯಡಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಖಂಡ್ರೆ ಅವರು, ಜಿಲ್ಲೆಯಲ್ಲಿ ಕಬ್ಬಿನ ಬೆಳೆ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ ಬೆಲ್ಲ ತಯಾರಿಕೆಯಲ್ಲಿ ಇನ್ನೂ ಹಳೆಯ ಪದ್ಧತಿ ಬಳಕೆಯಾಗುತ್ತಿದೆ. ಆಧುನಿಕ ಯಂತ್ರೋಪಕರಣಗಳ ಬಳಕೆ ಮೂಲಕ ವಿಭಿನ್ನ ರೀತಿಯ ಬೆಲ್ಲ ತಯಾರಿಕಾ ಘಟಕಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.
ಉದ್ಯಮಿಗಳಿಗೆ ತಾಂತ್ರಿಕ ಜ್ಞಾನ ನೀಡುವ ಕಾರ್ಯಾಗಾರಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕಿದ್ದು, ಭಾಗವಹಿಸುವ ಮೂಲಕ ಹೆಚ್ಚಿನ ಮಾಹಿತಿ ಪಡೆದು ಅನುಸರಿಸುವಂತೆ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನ್ನೋಳಿ, ಬಿ.ಜಿ. ಶೆಟಕಾರ್, ಶಿವರಾಜ್ ಹಲಶೆಟ್ಟಿ, ಡಿ.ವಿ. ಸಿಂಧೋಲ್, ಪಿ. ವಿಜಯಕುಮಾರ್, ದೇವೇಂದ್ರಪ್ಪ, ಬಸವರಾಜ್ ನಿಟ್ಟೂರೆ ಸೇರಿದಂತೆ ಉದ್ಯಮಿಗಳು ಉಪಸ್ಥಿತರಿದ್ದರು.