ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕವು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದೆ : ಶಾಸಕ ಬಿ.ಆರ್.ಪಾಟೀಲ್
ಕಲಬುರಗಿ: ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದು, ಹಿಂದುಳಿವಿಕೆಯ ಪತ್ತೆಗೆ ಮೌಲ್ಯಮಾಪನ ನಡೆಸುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ, ಆಳಂದ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
ಮಂಗಳವಾರ ಇಲ್ಲಿನ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ 20 ವರ್ಷದಿಂದ ಹಿಂದುಳಿವಿಕೆಯ ಕುರಿತು ಯಾವುದೇ ಮೌಲ್ಯಮಾಪನ ನಡೆದಿಲ್ಲ ಎಂದರು.
ರಾಜ್ಯದಲ್ಲಿ ಸುಸ್ಥಿರ ಅಭಿವೃದ್ಧಿಯ ನಿಟ್ಟಿನಲ್ಲಿ ಇದೇ ಪ್ರಥಮ ಬಾರಿಗೆ ಜಿಲ್ಲಾ ಹಂತದಲ್ಲಿ ಯೋಜನಾ ಆಯೋಗದಿಂದ ವಿವಿಧ ಇಲಾಖೆಗಳ ಪರಸ್ಪರ ಸಮಾಲೋಚನೆ ಸಭೆ ಕರೆಯಲಾಗಿದೆ. ಕೃಷಿಯಿಂದ ಜನ ವಿಮುಖವಾಗುತ್ತಿದ್ದಾರೆ. ಕೃಷಿ ಪ್ರಧಾನ ವ್ಯವಸ್ಥೆ ನಮ್ಮದಾಗಿದ್ದು, ಇದನ್ನು ಪ್ರೋತ್ಸಾಹಿಸಲು ಕೃಷಿಕರಿಗೆ ಪೂರಕವಾದ ಹೈನುಗಾರಿಕೆ, ತೋಟಗಾರಿಕೆ ಹಾಗೂ ಇತರೆ ಉಪ ಕಸುಬುಗಳನ್ನು ಮಾಡುವತ್ತ ಪ್ರೇರೇಪಿಸುವ ಕೆಲಸಗಳಾಗಬೇಕು ಎಂದರು.
ಕಲುಷಿತ ನೀರಿನ ಸೇವನೆಯಿಂದಲೆ ಬಹುತೇಕ ರೋಗಗಳಿಗೆ ಆಹ್ವಾನಿಸಿದಂತಿದೆ. ಹೀಗಾಗಿ ಶುದ್ಧ ಕುಡಿಯುವ ನೀರು ಪೂರೈಕೆಯ ಆದ್ಯತೆ ನಮ್ಮದಾಗಬೇಕಿದೆ. ವಾಟರ್ ಶೆಡ್ ನಿರ್ಮಾಣ ಹೆಚ್ಚುಗೊಳಿಸಿ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಬೇಕು. ನೀರಿಲ್ಲದೆ ಯಾವುದೇ ಯೋಜನೆ ಸಾಕಾರವಾಗುವುದಿಲ್ಲ ಎಂದರು.
ಯೋಜನಾ ಸಮಿತಿಗೆ ಚುನಾವಣೆ ನಡೆಸಿ:
ಪಂಚಾಯತ್ ರಾಜ್ ವ್ಯವಸ್ಥೆಗೆ 73-74ರ ತಿದ್ದುಪಡಿ ತಂದು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ಸಮಿತಿ ಸಭೆ ರಚಿಸಲಾಗಿದ್ದರು, ಅದು ರಾಜ್ಯದಲ್ಲಿ ಸಕ್ರಿಯವಾಗಿ ಸಭೆ ನಡೆಸುತ್ತಿಲ್ಲ. ಪರಿಣಾಮ ಜಿಲ್ಲೆಗಳಲ್ಲಿ ಸುಸ್ಥಿರ ಅಭಿವೃದ್ಧಿಗೆ ಪೂರಕ ಯೋಜನೆಗಳು ರೂಪುಗೊಳ್ಳುತ್ತಿಲ್ಲ. ಇನ್ನು ಕೆಲವೆಡೆ ಯೋಜನಾ ಸಮಿತಿಗಳಿಗೆ ಚುನಾವಣೆಯೇ ನಡೆದಿಲ್ಲ. ಕೂಡಲೇ ಸಂವಿಧಾನಬದ್ಧ ಸಂಸ್ಥೆಗೆ ಚುನಾವಣೆ ನಡೆಸಬೇಕು. ಚುನಾವಣಾ ನಡೆಯದ ಕಡೆ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಕರೆಯಬೇಕು ಎಂದು ಬಿ.ಆರ್.ಪಾಟೀಲ್ ಹೇಳಿದರು.