ಕಾರ್ಪೊರೇಟ್ ಪರ ಬಜೆಟ್: ಕೆ.ನೀಲಾ ಟೀಕೆ
ಕೆ ನೀಲಾ
ಕಲಬುರಗಿ: ರಾಜ್ಯ ಸರ್ಕಾರ ಮಂಡಿಸಿರುವ 2026–27ನೇ ಸಾಲಿನ ಬಜೆಟ್ ಜನಪರತೆಯ ಮುಖವಾಡ ಧರಿಸಿದರೂ ವಾಸ್ತವದಲ್ಲಿ ಖಾಸಗಿ ಮತ್ತು ಕಾರ್ಪೊರೇಟ್ ಬಂಡವಾಳಿಗರಿಗೆ ಅನುಕೂಲ ಮಾಡಿಕೊಡುವಂತಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕರ್ನಾಟಕ ರಾಜ್ಯ ಸಮಿತಿ ತೀವ್ರ ಟೀಕೆ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ, ರಾಜ್ಯ ಸರ್ಕಾರ ಮಂಡಿಸಿರುವ ಸುಮಾರು 4.48 ಲಕ್ಷ ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ 1.34 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲವನ್ನು ಮತ್ತೆ ಹೊರಿಸಲಾಗಿದೆ. 2024–25ರಲ್ಲಿ ಸುಮಾರು 5 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದ ರಾಜ್ಯದ ಒಟ್ಟು ಸಾಲ ಈಗ ಅಂದಾಜು 8 ಲಕ್ಷ ಕೋಟಿ ರೂಪಾಯಿಗಳನ್ನು ದಾಟುವ ಸಾಧ್ಯತೆ ಇದೆ. ಸರ್ಕಾರದ ವೆಚ್ಚಗಳನ್ನು ನಿರ್ವಹಿಸಲು ಸಾಲವೇ ಪ್ರಮುಖ ಆಧಾರವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೈಗಾರಿಕಾವೃದ್ಧಿ ಪ್ರಮುಖವಾದರೂ, ಹೊಸ ಕೈಗಾರಿಕಾ ದೃಷ್ಟಿಕೋನ ಅಥವಾ ಗೌರವಯುತ ಆದಾಯದ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಸ್ಪಷ್ಟ ಯೋಜನೆಗಳು ಬಜೆಟ್‌ನಲ್ಲಿ ಕಾಣುತ್ತಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ಸಂಹಿತೆಗಳ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಸ್ಪಷ್ಟ ನಿಲುವು ತೋರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಾದ ಮನರೇಗಾ ಸಂಬಂಧವೂ ಬಜೆಟ್‌ನಲ್ಲಿ ಸಮರ್ಪಕ ಪ್ರಯತ್ನ ಕಾಣುತ್ತಿಲ್ಲ. ಕಳೆದ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 26,735 ಕೋಟಿ ರೂಪಾಯಿ ಮೀಸಲಿದ್ದರೆ, ಈ ಬಾರಿ 26,559 ಕೋಟಿ ರೂಪಾಯಿ ಮಾತ್ರ ಮೀಸಲಿಟ್ಟು 176 ಕೋಟಿ ರೂ. ಕಡಿತ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿಯೂ ಹಲವು ಸಮಸ್ಯೆಗಳಿದ್ದರೂ ಅವುಗಳಿಗೆ ಸ್ಪಷ್ಟ ಪರಿಹಾರ ಕ್ರಮಗಳು ಕಾಣುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಭರವಸೆ ಈಡೇರಿಸಿಲ್ಲ ಎಂದು ದೂರಿದ್ದಾರೆ.
ವೃದ್ಧರು, ವಿಧವೆಯರು, ಅಂಗವಿಕಲರು ಹಾಗೂ ದೇವದಾಸಿಯರಾಗಿದ್ದ ಮಹಿಳೆಯರ ಕಲ್ಯಾಣಕ್ಕಾಗಿ ಯಾವುದೇ ಪ್ರಮುಖ ಘೋಷಣೆಗಳಿಲ್ಲದಿರುವುದರಿಂದ ಇದು ಜನಪರತೆ ಇಲ್ಲದ ನೀರಸ ಬಜೆಟ್ ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಅಭಿಪ್ರಾಯಪಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.