×
Ad

ಆಳಂದ | ಮಕ್ಕಳ ಸ್ನೇಹಿ ಸಮಾಜ ನಿರ್ಮಾಣಕ್ಕೆ ಜ್ಞಾನಕ್ಕಿಂತ ಕೌಶಲ್ಯ ಅಗತ್ಯ : ಕುಲಪತಿ ಪ್ರೊ.ಬಟ್ಟು ಸತ್ಯಾನಾರಾಯಣ

Update: 2026-03-07 20:27 IST

ಆಳಂದ : ಪ್ರಸ್ತುತ ಕಾಲದಲ್ಲಿ ಸಮಾಜ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ಬದಲಾದ ಕಾನೂನು-ಕಾಯಿದೆಗಳು ಹಾಗೂ ಸರ್ಕಾರದ ಹೊಸ ನೀತಿಗಳನ್ನು ನಿರಂತರವಾಗಿ ಕಲಿಯುತ್ತಿರಬೇಕು. ಅದಾಗಿಯೇ ಅವರು ತಮ್ಮ ಕಾರ್ಯಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯಾನಾರಾಯಣ ಅಭಿಪ್ರಾಯಪಟ್ಟರು.

ತಾಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧ ಆಂದೋಲನ, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಬೆಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದಕ್ಷಿಣ ಕನ್ನಡ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸ್ನಾತ್ತಕೊತ್ತರ ಸಮಾಜ ಕಾರ್ಯ ವಿಭಾಗ ಹಾಗೂ ಐ.ಎಲ್.ಪಿ ಮತ್ತು ಎಫ್.ಸಿ.ಡಬ್ಲ್ಯೂ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಮೂರು ದಿನಗಳ “ಮಕ್ಕಳ ಸ್ನೇಹಿ ಸಮಾಜ ಸೃಷ್ಟಿಯತ್ತ ಬದಲಾವಣೆಯ ಹರಿಕಾರರ ಕರ್ನಾಟಕ ರಾಜ್ಯ ಮಟ್ಟದ ಸಶಕ್ತೀಕರಣ ತರಬೇತಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಪರಿಸ್ಥಿತಿಯಲ್ಲಿ ಸಮಾಜ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುವುದು ಸುಲಭದ ವಿಷಯವಲ್ಲ. ಕಾರ್ಯಕರ್ತರು ವಿವಿಧ ರೀತಿಯ ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸಲು ಸದಾ ಸಿದ್ಧರಾಗಿರಬೇಕು. ಕೇವಲ ಜ್ಞಾನವಿದ್ದರೆ ಸಾಕಾಗುವುದಿಲ್ಲ. ಅದರೊಂದಿಗೆ ಅಗತ್ಯವಾದ ಕೌಶಲ್ಯಗಳು ಕೂಡ ಪ್ರತಿಯೊಬ್ಬರಲ್ಲೂ ಬೆಳೆಸಿಕೊಳ್ಳಬೇಕು. ಈ ತರಬೇತಿ ಶಿಬಿರವು ಪರಿಣಾಮಕಾರಿಯಾಗಿ ನಡೆಯಲಿ, ಶಿಬಿರಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ತರಬೇತಿಯ ಸಂಪೂರ್ಣ ಪ್ರಯೋಜನ ಪಡೆದು ಅದನ್ನು ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸ್ನಾತ್ತಕೊತ್ತರ ಸಮಾಜ ಕಾರ್ಯ ವಿಭಾಗದ ಪ್ರೊ. ಚೆನ್ನವೀರ ಆರ್.ಎಂ., ಡೀನ್ ಪ್ರೊ. ಪವಿತ್ರಾ ಆರ್. ಆಲೂರ, ಸಿವಿಕ್ ಸಂಸ್ಥೆ ಬೆಂಗಳೂರು ಕಾರ್ಯಕಾರಿ ನಿರ್ದೇಶಕಿ ಕಾತ್ಯಾಯಿನಿ ಚಾಮರಾಜನ್, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದಕ್ಷಿಣ ಕನ್ನಡದ ಸಂಚಾಲಕ ರೆನ್ನಿ ಡಿ’ಸೋಜ ಹಾಗೂ ಮಾರ್ಗದರ್ಶಿ ಸಂಸ್ಥೆ ಕಲಬುರ್ಗಿ ನಿರ್ದೇಶಕ ಆನಂದ್ ರಾಜ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ (ಏಅಖಔ) ಬೆಂಗಳೂರು ಸಂಚಾಲಕ ಡಾ. ಎನ್.ವಿ. ವಾಸುದೇವ ಶರ್ಮಾ ತರಬೇತಿಯ ಉದ್ದೇಶ ಹಾಗೂ ಗುರಿಗಳ ಕುರಿತು ಪ್ರಾಸ್ತಾವಿಕವಾಗಿ ವಿವರಿಸಿದರು. ಸಿಎಸಿಎಲ್‌ಕೆ ರಾಜ್ಯ ಸಂಚಾಲಕಿ ಸರಸ್ವತಿ ಸ್ವಾಗತಿಸಿದರು. ಸಹ ಸಂಚಾಲಕ ಸಂಪತ್ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯದ 31 ಜಿಲ್ಲೆಗಳಿಂದ ಆಗಮಿಸಿದ ಸುಮಾರು 55 ಶಿಬಿರಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ನುರಿತ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ವಿಚಾರ ಮಂಡನೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News